ನಾಗಮಂಗಲ: ಸೆ :-,, 6 ಆಕಾಶದಲ್ಲಿ ಮೋಡಗಳಿದ್ದರೂ ಮಳೆ ಸುರಿಯದೆ ರೈತರು ಆತಂಕದಲ್ಲಿರುವ ಬೆನ್ನಲ್ಲೇ, ಮಳೆರಾಯನನ್ನು ಒಲಿಸಿಕೊಳ್ಳಲು ಗ್ರಾಮಸ್ಥರು ವಿಶಿಷ್ಟ ಜಾನಪದ ಆಚರಣೆಯೊಂದನ್ನು ನಡೆಸಿದ ಘಟನೆ ತಾಲೂಕಿನ ದೇವಲಾಪುರದಲ್ಲಿ ನೆಡೆಯಿತು.
ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿ ಮಳೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಗಂಡು-ಹೆಣ್ಣು ವೇಷದಲ್ಲಿ ಕೂರಿಸಿ ಸಾಂಕೇತಿಕವಾಗಿ ಮದುವೆ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮಸ್ಥರು ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ವರುಣದೇವನನ್ನು ಪ್ರಾರ್ಥಿಸಿ, ಉತ್ತಮ ಮಳೆಯಾಗಲಿ, ಕೆರೆ-ಕಟ್ಟೆಗಳು ತುಂಬಲಿ, ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಬೇಡಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು. ವಿಶೇಷ ಆಚರಣೆಯನ್ನು ನೋಡಲು ಸುತ್ತಮುತ್ತಲಿನ ಜನರೂ ಆಗಮಿಸಿದ್ದರಿಂದ ಗ್ರಾಮದಲ್ಲಿ ಕೆಲಕಾಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಈ ಮಳೆರಾಯನ ಮದುವೆದಿಬ್ಬಣ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮಳೆರಾಯನ ಮಳೆಗಾಗಿ ಬೇಡಿಕೊಳ್ಳುವ ಜನಪದ ಶೈಲಿ ಹಾಡುಗಳು ಮೆರವಣಿಯ ಉದ್ದಕ್ಕು ಹಿರಿಯ ಮಹಿಳೆಯರು ಹಾಡುತ್ತಿದ್ದರು.
ಮಳೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಹಲವು ಜಾನಪದ ಆಚರಣೆಗಳು ನಡೆದುಕೊಂಡು ಬರುತ್ತಿವೆ. ಅದೇ ನಂಬಿಕೆಯ ಹಿನ್ನೆಲೆಯಲ್ಲಿ ಈ ಸಾಂಕೇತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
