ಹನೂರು: ತಾಲೂಕಿನ ಗಡಿ ಹಾಗೂ ಕಾಡಂಚಿನ ಗ್ರಾಮವಾದ ಗೋಪಿನಾಥಂನಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಗ್ರಾಮಕ್ಕೆ ಆಗಮಿಸಿದ ಶಾಸಕರನ್ನು ಸ್ಥಳೀಯರು ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ನೂತನ ಆಸ್ಪತ್ರೆ ಕಟ್ಟಡದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊರರೋಗಿ ವಿಭಾಗ (OPD), ವೈದ್ಯರ ಕೊಠಡಿ, ವಿಚಾರಣೆ ಮತ್ತು ಕಚೇರಿ, ಪ್ರಯೋಗಾಲಯ (Lab), ಔಷಧಾಲಯ (Pharmacy), ಉಗ್ರಾಣ ಹಾಗೂ ಸಭಾಂಗಣ.
ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಾರ್ಡ್‌ಗಳು, ಪ್ರಿಪರೇಷನ್ ಕೊಠಡಿ, ಮೈನರ್ ಓಟಿ , ಹೆರಿಗೆ ಕೊಠಡಿ ಹಾಗೂ ಚುಚ್ಚುಮದ್ದು ಕೊಠಡಿ.
ಬೋರ್‌ವೆಲ್, 5 KVA ಜನರೇಟರ್, ಯುಪಿಎಸ್, ಸೋಲಾರ್ ವ್ಯವಸ್ಥೆ, ಸಂಪ್, ಸೆಪ್ಟಿಕ್ ಟ್ಯಾಂಕ್ ಹಾಗೂ ಓವರ್‌ಹೆಡ್ ಟ್ಯಾಂಕ್ ವ್ಯವಸ್ಥೆಯನ್ನು ಹೊಂದಿರುತ್ತದೆ.
ಈ ಆರೋಗ್ಯ ಕೇಂದ್ರ ನಿರ್ಮಾಣದಿಂದ ಗೋಪಿನಾಥಂ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಕಾಡಂಚಿನ ಗ್ರಾಮಗಳ ಜನರಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯಲಿದ್ದು, ಅನುಕೂಲವಾಗುತ್ತದೆ. ಮುಖ್ಯವಾಗಿ ತುರ್ತು ಚಿಕಿತ್ಸೆ, ಗರ್ಭಿಣಿಯರು ಮತ್ತು ವೃದ್ಧರು ಸಣ್ಣಪುಟ್ಟ ಚಿಕಿತ್ಸೆಗಳಿಗೂ ಹನೂರು ಅಥವಾ ಕೊಳ್ಳೇಗಾಲ ನಗರಗಳಿಗೆ ಅಲೆಯುವ ಅನಿವಾರ್ಯತೆ ತಪ್ಪಲಿದೆ.
ಕಾರ್ಯಕ್ರಮದ ವೇಳೆ ಸ್ಥಳೀಯರು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗದೆ ಆಸ್ಪತ್ರೆಗೆ ಖಾಯಂ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಎಂ.ಆರ್. ಮಂಜುನಾಥ್, ಗೋಪಿನಾಥಂ ಭಾಗದ ಜನರ ಬಹುದಿನಗಳ ಬೇಡಿಕೆ ಇಂದು ಈಡೇರುತ್ತಿದೆ. ಸ್ಥಳೀಯವಾಗಿ ಅಥವಾ ಸುತ್ತಮುತ್ತಲ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಆಸಕ್ತರಿರುವ ವೈದ್ಯರ ಮಾಹಿತಿ ನೀಡಿದರೆ ಅವರನ್ನು ತಕ್ಷಣವೇ ಇಲ್ಲಿಗೆ ನೇಮಕ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಮಹೇಂದ್ರ, ಗೋಪಿನಾಥಂ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಗುರುಮೂರ್ತಿ, ಎಸಿಎಫ್ ರಾಜಶೇಖರ್ ಮೂರ್ತಿ, ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಎಇ ಸಂತೋಷ್, ಮುಖಂಡರಾದ ಮಂಜೇಶ್, ಮಾರ್ಟಳ್ಳಿ ಮಣಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರೆಡ್ಡಿಯಾರ್ ನಾಗರಾಜ್, ಜಯರಾಮ್ ರೆಡ್ಡಿ, ರಾಜೇಂದ್ರ, ಪಳನಿ, ದೊರೆಸ್ವಾಮಿನಾಗ್ಯ, ಪೆರುಮಾಳ್, ಮುರುಕೊಟ್ಟಯ್ಯ, ಗೋವಿಂದರಾಜು, ಆತುರ್ ಕುಪ್ಪುಸ್ವಾಮಿ ಕೌಂಡರ್, ಶ್ರೀನಿವಾಸ್, ಮುರುಗನ್, ಪು ರಾಜ, ರಮೇಶ್ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ವರದಿ. ಶಂಕರ್ ಎಂ
