ಕಲಘಟಗಿ: ಗ್ರಾಮೀಣ ಕ್ರೀಡೆಗಳಾದ ಕಬಡ್ಡಿಯ ಜೊತೆಗೆ ಬಂಜಾರ ಸಂಸ್ಕೃತಿ, ಭಾಷೆ ಹಾಗೂ ಸಾಹಿತ್ಯವನ್ನು ಬೆಳೆಸುವ ಅಗತ್ಯವಿದೆ ಎಂದು ಬಂಜಾರ ಸಾಹಿತಿ ಹಾಗೂ ಗಾಯಕ ಗೋಪಾಲ ಬಿ. ನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಕಿಲಾರಹಟ್ಟಿ ತಾಂಡಾದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಕಿರಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಕ್ರೀಡೆಗಳು ಮಕ್ಕಳ ದೈಹಿಕ
ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿವೆ. ಇದರ ಜೊತೆಗೆ ಬಂಜಾರ ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಮೊಬೈಲ್ ವ್ಯಸನ ಕಡಿಮೆ ಮಾಡುವತ್ತ ಪೋಷಕರು ಹಾಗೂ ಶಿಕ್ಷಕರು ಗಮನ ಹರಿಸಬೇಕು. ನೈತಿಕ ಶಿಕ್ಷಣದೊಂದಿಗೆ ಸಾಮಾಜಿಕ ಸಮನ್ವಯತೆ, ಸಹೋದರತೆ, ಸಹಬಾಳ್ವೆ ಮತ್ತು ಏಕತಾ ಮನೋಭಾವವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶಪ್ಪ ರಾಠೋಡ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಿಮ್ಮಪ್ಪ ಮಡ್ಡರ್, ಗಿರಿಯಪ್ಪ ಗೌಡರ, ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕ ಚಂದ್ರಶೇಖರ, ಊರಿನ ಹಿರಿಯರಾದ ಗುಂಡಪ್ಪ ಭೋಜ ನಾಯ್ಕ, ಶ್ರೀಕಾಂತ್ ರಾಠೋಡ್, ಹನುಮಂತ ಚವ್ಹಾಣ ಹಾಗೂ ಯುವಕರಾದ ಸೀತಾರಾಮ್ ರಾಠೋಡ್, ಜಗನ್, ಮಾರುತಿ, ಕಿರಣ್, ಲೋಹಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
✍️ವರದಿ : ಮಾರುತಿ ಲಮಾಣಿ
