*ಕೆ.ಎಂ ದೊಡ್ಡಿ :-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಭಿವೃದ್ಧಿ ಕಾರ್ಯಗಳ ವೇಗವನ್ನು ಸಹಿಸಿಕೊಳ್ಳಲಾಗದೆ, ರಾಜ್ಯದಲ್ಲಿ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹತಾಶ ಯತ್ನದಿಂದಲೇ ಬಿಜೆಪಿ ನಾಯಕರು ಪಾದಯಾತ್ರೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೆ.ಎಂ ದೊಡ್ಡಿಯಲ್ಲಿ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಮದ್ದೂರು ನಗರಸಭಾ ಕಾರ್ಯಾಲಯದ ವತಿಯಿಂದ ಸುಮಾರು 55 ಲಕ್ಷ ವೆಚ್ಚದಲ್ಲಿ ನೀರು ಎತ್ತುವ ಕೇಂದ್ರಕ್ಕೆ ತಡೆಗೋಡೆ ನಿರ್ಮಾಣ ಮತ್ತು ಕಟ್ಟಡ ಉನ್ನತಿಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಮತ್ತು ಆಡಳಿತದ ವೇಗವನ್ನು ಕಂಡು ವಿರೋಧ ಪಕ್ಷದವರಿಗೆ ದಿಕ್ಕು ತೋಚದಂತಾಗಿದೆ. ರಾಜ್ಯದ ಜನತೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮೆಚ್ಚಿಕೊಂಡಿದ್ದು, ಬಿಜೆಪಿಯ ನಟನಾ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ಹಾಗೂ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಇಂತಹ ನಿರರ್ಥಕ ಪಾದಯಾತ್ರೆಗಳನ್ನು ನಡೆಸಲಾಗುತ್ತಿದೆ ಹೊರತು ಜನಪರ ಕಾಳಜಿಯಿಂದಲ್ಲ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಸ್ಪೀಡ್ ಕಡಗಣಿಸಲು ವಿರೋಧ ಪಕ್ಷಗಳು ವಿಫಲವಾಗಿವೆ. ಬರೀ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಮದ್ದೂರು ನಗರ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು ಕಾಮಗಾರಿ ಶೀಘ್ರವಾಗಿ ಪ್ರಾರಂಭಗೊಂಡು ನಿಗಧಿತ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಹಾಗೂ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್ ಮಾಜಿ ಗ್ರಾಪಂ ಸದಸ್ಯ ಪುಟ್ಟರಾಮು ಮುಖಂಡರಾದ ಪೂಜಾರಿ ಮಹೇಶ್,ಸಿದ್ದರಾಜು , ಸಿದ್ದರಾಮೇಗೌಡ ,ವೆಂಕಟೇಶ್ ,ಗೋವಿಂದರಾಜು,ನವೀನ್ ,ಅಭಿಷೇಕ,ಸೇರಿದಂತೆ ಹಲವರು ಉಪಸ್ಥಿತರಿದ್ದರು..
*ವರಧಿ :- ಸಂತೋಷ್ ಟಿಬಿ*
