Ticker

6/recent/ticker-posts

ಹನೂರು ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಹೋರಾಟ: ಬಿಜೆಪಿ ಮುಖಂಡ ನಿಶಾಂತ್ ಸ್ಪಷ್ಟನೆ.

ಹನೂರು:ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ತಾವು ಪ್ರಾಮಾಣಿಕವಾಗಿ ಹೋರಾಡುತ್ತಿದ್ದು ಶೂಟ್‌ಔಟ್ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ಮಾಡುವ ಅಗತ್ಯ ನನಗಿಲ್ಲ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ನಿಶಾಂತ್ ಸ್ಪಷ್ಟಪಡಿಸಿದ್ದಾರೆ.

ಹನೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರುr ಇತ್ತೀಚೆಗೆ ನಡೆದ ಶೂಟ್‌ಔಟ್ ಪ್ರಕರಣ ಖಂಡಿಸಿ ಹನೂರು ಬಂದ್‌ಗೆ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಡಿಎಸ್‌ಎಸ್, ಬಿಎಸ್‌ಪಿ, ಕೆಆರ್‌ಎಸ್ ಹಾಗೂ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿದ್ದವು. 

ತಾವು ಯಾವುದೇ ಪಕ್ಷದ ವತಿಯಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಕೇವಲ ಮಾನವೀಯತೆಯ ಆಧಾರದ ಮೇಲೆ ಸಂತ್ರಸ್ತರಿಗೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಸಿಬಿಐ ತನಿಖೆಗೆ ಒತ್ತಾಯಿಸಿ ಬೆಂಬಲ ಸೂಚಿಸಿರುವುದಾಗಿ ತಿಳಿಸಿದರು.
ರಾಜಕೀಯವನ್ನು ರಾಜಕೀಯವಾಗಿಯೇ ಮಾಡುತ್ತೇವೆ. ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಶಾಸಕ ಮಂಜುನಾಥ್ ಅವರು ಪಕ್ಷಾತೀತವಾಗಿ ಈ ವಿಚಾರವಾಗಿ ವಿಧಾನಸೌಧಕ್ಕೆ ನಿಯೋಗ ಕರೆದೊಯ್ದರೆ ನಾವು ಜೊತೆಯಾಗಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದೇನೆ ಎಂದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೋರಾಟ ಮಾಡಲು ತಮಗೆ ಸ್ವತಂತ್ರ ಶಕ್ತಿಯಿದ್ದು ಬೇರೆಯವರ ಜೊತೆ ಸೇರಿ ಹೋರಾಟ ಮಾಡುವ ಅಗತ್ಯವಿಲ್ಲ ಎಂಬುದನ್ನು ಈಗಾಗಲೇ ಹಲವು ಬಾರಿ ಸಾಬೀತುಪಡಿಸಿರುವುದಾಗಿ ಹೇಳಿದರು.

ಮಾರ್ಟಳ್ಳಿ ಭಾಗದಲ್ಲಿ ಮಳೆಗಾಲದ ನೀರು ವ್ಯರ್ಥವಾಗುವುದನ್ನು ತಡೆಯಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಚೆಕ್‌ಡ್ಯಾಂ ತಡೆಗೋಡೆ ನಿರ್ಮಾಣ ಹಾಗೂ ಹಲವಾರು ಕೆರೆ/ಡ್ಯಾಂಗಳಲ್ಲಿ ಹೂಳು ತೆಗೆಸುವ ಕೆಲಸ.ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗಾಗಿ ರೈತರೊಂದಿಗೆ ಸತತ 153 ದಿನಗಳ ಕಾಲ ಧರಣಿಯಲ್ಲಿ ಭಾಗಿ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಸದುದ್ದೇಶದಿಂದ ಮಾಡಿದ್ದೇನೆ.

ತಮ್ಮ ಏಳಿಗೆಯನ್ನು ಸಹಿಸದ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುವ ಮೂಲಕವೇ ಅವರಿಗೆ ಉತ್ತರ ನೀಡುವುದಾಗಿ  ತಿರುಗೇಟು ನೀಡಿದರು.

 ವರದಿ.ಶಂಕರ್ ಎಂ