ಬೇಲೂರು :-ಕಾಡಾನೆಗಳಿಂದ ಜೀವ ರಕ್ಷಣೆಗಾಗಿ ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೇಲೂರು ತಾಲ್ಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂದಹಳ್ಳಿ ಗ್ರಾಮದ ಕೇಶವಶೆಟ್ಟಿ (61) ಮೃತಪಟ್ಟ ಕಾಫಿ ಬೆಳೆಗಾರ. ಗ್ರಾಮದ ಶೈಲೇಶ್ ಎಂಬುವವರಿಗೆ ಸೇರಿದ ಇಶ್ಚಿತ ಎಸ್ಟೇಟ್‌ನಲ್ಲಿ ಈ ದುರಂತ ಸಂಭವಿಸಿದೆ.
ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಇದ್ದ ಕಾರಣ, ನಿನ್ನೆ ಸಂಜೆ ಕೇಶವಶೆಟ್ಟಿ ಅವರು ತಮ್ಮ ಜೀವ ರಕ್ಷಣೆಗಾಗಿ ಬಂದೂಕಿನೊಂದಿಗೆ ಕಾಫಿ ತೋಟಕ್ಕೆ ತೆರಳಿದ್ದರು.
ಈ ವೇಳೆ ತೋಟದಲ್ಲಿ ನಡೆದು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿರಬಹುದು ಎಂದು ಶಂಕಿಸಲಾಗಿದೆ. ಗುಂಡು ತಗಲಿದ ನಂತರವೂ ಅವರು ಸುಮಾರು 300 ಮೀಟರ್‌ಗಳಷ್ಟು ದೂರ ನಡೆದುಕೊಂಡು ಬಂದು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳದಿಂದ 300 ಮೀಟರ್ ದೂರದಲ್ಲಿ ಅವರ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭಾನ್ವಿತ ಹಾಗೂ ಸೋಕೋ (SOCO) ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಕುರಿತು ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
