Ticker

6/recent/ticker-posts

ಪ್ರವಾದಿ ಮುಹಮ್ಮದ್ ಕುರಿತು ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ



ಅರೇಹಳ್ಳಿ: ಜಮಾಅತೆ ಇಸ್ಲಾಮಿ ಹಿಂದ್ ನ ವತಿಯಿಂದ ಪ್ರವಾದಿ ಮುಹಮ್ಮದ್  ಅವರ ಜನ್ಮದಿನದ ಪ್ರಯುಕ್ತ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರವರೆಗೆ ರಾಜ್ಯಾದ್ಯಂತ ‘ಸೀರತ್ ಅಭಿಯಾನ’ ನಡೆಯಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅರೇಹಳ್ಳಿ ಘಟಕದ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ತಿಳಿಸಿದರು.

ಬೇಲೂರು ತಾಲೂಕು ಅರೇಹಳ್ಳಿಯ ಹಿರಾ ಸೆಂಟರ್‌ನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ‘ಮಾನವ ಮನಸ್ಸಿನ ಕೃಷಿಕ – ಮಹದೋದ್ದೇಶದ ಪ್ರವಾದಿ ಮುಹಮ್ಮದ್’ ಹಾಗೂ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್’ ಎಂಬ ಎರಡು ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ಅವರು ಜಗತ್ತಿಗೆ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ತತ್ವಗಳ ಮೇಲೆ ಸ್ಥಾಪಿತವಾಗಿದೆ. ಜನರ ಮನಸ್ಸನ್ನು ಸಂಸ್ಕರಿಸುವ ಮೂಲಕ ಅವರ ನೈತಿಕತೆ ಹಾಗೂ ಚಾರಿತ್ರ್ಯವನ್ನು ಶುದ್ಧೀಕರಿಸಿ ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗೆ ಕಾರಣರಾದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು.
ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಭಿಕ್ಷೆ ಮತ್ತು ನಿರ್ಭಯತೆಯ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು .

ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವ ಉದ್ದೇಶದಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್’ ಶೀರ್ಷಿಕೆಯಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು ಹಾಗೂ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಅರೇಹಳ್ಳಿಯ ಹಿರಾ ಸೆಂಟರ್‌ನಲ್ಲಿ ಸೆಪ್ಟೆಂಬರ್ 1ರಂದು ಸೀರತ್ ಪ್ರವಚನ ನಡೆಯಲಿದ್ದು, ಎಲ್ಲ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಮಾಅತೆಯ ಹೋಬಳಿ ಘಟಕದ ಅಧ್ಯಕ್ಷ ಇಜಾರ್ ಅಸರ್ ಉಮ್ರಿ ಹಾಗೂ ಜಮಾಅತೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.