Ticker

6/recent/ticker-posts

ಪತ್ರಕರ್ತರು ನೊಂದವರ ಧ್ವನಿಯಾಗಬೇಕು: ಶಾಸಕ ಎಂ.ಆರ್. ಮಂಜುನಾಥ್


ಹನೂರು: ಪತ್ರಕರ್ತರು ಯಾವುದೇ ಒತ್ತಡಕ್ಕೆ ಒಳಗಾಗದೆ ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ನೊಂದವರ ಧ್ವನಿಯಾಗಿ ಮತ್ತು ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಪತ್ರಕರ್ತರ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಪತ್ರಿಕಾರಂಗಕ್ಕೆ ನಾಲ್ಕನೇ ಅಂಗ ಎಂಬ ಮಹತ್ವದ ಸ್ಥಾನವಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿಯ ಸಾರಾಂಶವನ್ನು ಸರಿಯಾಗಿ ತಿಳಿದುಕೊಂಡು, ಸತ್ಯಸಂಗತಿಗೆ ಆದ್ಯತೆ ನೀಡಿ ವರದಿ ಮಾಡುವುದು ಅಗತ್ಯ. ಸರ್ಕಾರದ ಯೋಜನೆಗಳು ಹಾಗೂ ಜನರ ಸಮಸ್ಯೆಗಳ ನಡುವೆ ಪತ್ರಕರ್ತರು ಸತ್ವಯುತ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ಶ್ಲಾಘಿಸಿದರು. 

 ಮಾಜಿ ಶಾಸಕ ಆರ್. ನರೇಂದ್ರ ರಾಜುಗೌಡರವರು ಮಾತನಾಡಿ ನಮ್ಮ ಭಾಗದ ಪತ್ರಕರ್ತರು ಅತ್ಯಂತ ಶ್ರಮಜೀವಿಗಳು. ಸಂಘದ ಬೆಂಬಲಕ್ಕೆ ನಾವು ಸದಾ ಸಿದ್ಧ. ಪತ್ರಿಕೆಗಳಲ್ಲಿ ಜಾಹೀರಾತುಗಳ ನಡುವೆಯೂ ವಸಂತ ಕಿರಣ ಸುದ್ದಿ ಮತ್ತು ಮಂಥನ ಮಾನಸ ಪತ್ರಿಕೆಗಳು ಜಾಗತಿಕ ವಿಷಯಗಳನ್ನು ಅರ್ಥಗರ್ಭಿತವಾಗಿ ಜನರಿಗೆ ತಲುಪಿಸುತ್ತಿರುವುದು ಅಭಿನಂದನೀಯ ಎಂದರು.

ಸಮಾಜ ಸೇವಕ ನಿಶಾಂತ್ ಮಾತನಾಡಿ ಗ್ರಾಮೀಣ ಭಾಗದ ಪತ್ರಕರ್ತರ ಶ್ರಮ ಅಪಾರವಾದದ್ದು. ಪತ್ರಕರ್ತರಿಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ತಮ್ಮಿಂದಾಗುವ ಪ್ರಾಮಾಣಿಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 
 ಬಸವರಾಜು (ಸಹಕಾರ), ನವನೀತ್ ಗೌಡ(ಕೃಷಿ), ಅಮ್ಜಾದ್ ಖಾನ್ (ಕೃಷಿ), ವೆಂಕಟಚಾರಿ (ಧಾರ್ಮಿಕ), ರಾಘವೇಂದ್ರ (ಶಿಕ್ಷಣ), ಶರವಣ (ಕಂದಾಯ), ಹರ್ಪಿತಾ (ಪಿಯುಸಿ) ಹಾಗೂ ಶಬರಿ (೧೦ನೇ ತರಗತಿ) ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಾಲೂರು ಬೃಹನ್ಮಠದ ಶ್ರೀ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಚೆಸ್ಕಾಂನ ಎಇಇ ರಂಗಸ್ವಾಮಿ, ರೈತ ಮುಖಂಡರಾದ ಶೈಲೇಂದ್ರ ಸ್ವಾಮಿ, ಗೌಡೇಗೌಡ, ಚಂಗಡಿ ಕರಿಯಪ್ಪ, ರಾಚಪ್ಪ, ಪೊನ್ನಾಚಿ ರಂಗಸ್ವಾಮಿ, ಪುಟ್ಟರಾಜು, ಬಿಂದು ಅಕ್ಕ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ವರದಿ:- ಶಂಕರ್. ಎಂ