ಚಾಮರಾಜನಗರ : ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಸತ್ಯಮಂಗಲಂ ತಾಲ್ಲೂಕಿನ ಹೊಂಗಲವಾಡಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದ ಆವರಣದಲ್ಲಿ ದಿನಾಂಕ 26-03-2026 ರಂದು ಗುರುವಾರ ರಾತ್ರಿ 7.30 ಗಂಟೆಗೆ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ವತಿಯಿಂದ ಭಕ್ತಿಪೂರ್ಣ ಹಾಗೂ ಚಿಂತನೆ ಪ್ರಧಾನ ಶರಣ ಸಂಗಮ ಕಾರ್ಯಕ್ರಮ ಮತ್ತು ಒಡೆಯರ್ ಪಾಳ್ಯ ನಂದೀಶ್ ರವರ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆಯ ಗೌಡರ ರಾಜಪ್ಪ ಅವರು ವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಹೆಚ್ ಎಸ್ ಮಹದೇವಸ್ವಾಮಿ (ಎನ್‌ರಿಚ್) ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬಸವೇಶ್ವರ ಹಾಗೂ ಶರಣರ ಚಿಂತನೆಗಳನ್ನು ಜನಮನಗಳಿಗೆ ತಲುಪಿಸುವ ಕಾರ್ಯದಲ್ಲಿ ಜಿಲ್ಲಾ ಬಸವ ಕೇಂದ್ರ ತೊಡಗಿಸಿಕೊಂಡಿದ್ದು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸಾಂವಿಧಾನಿಕ ಮಾನ್ಯತೆ ದೊರಕಿಸುವ ಉದ್ದೇಶದಿಂದ
ಮನೆ ಮನದ ಅಭಿಯಾನ” ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ
ವಚನಗಳಲ್ಲಿ ಲೋಕಾನುಭವ ಎಂಬ ವಿಷಯದ ಮೇಲೆ ಕನ್ನಡ ಪಂಡಿತರಾದ ಮಾಸ್ಟರ್ ಮಹದೇವಸ್ವಾಮಿರವರು ಪ್ರವಚನ ನೀಡಿ, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಸವಾದಿ ಶರಣರ ಚಿಂತನೆಗಳಲ್ಲಿ ಶಾಶ್ವತ ಪರಿಹಾರ ಅಡಕವಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ಇತ್ತೀಚೆಗೆ ಹುತ್ತೂರು ಪ್ರಾಥಮಿಕ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಬಸವ ಅಭಿಮಾನಿ ಒಡೆಯರ್ ಪಾಳ್ಯ ನಂದೀಶ್ ಅವರನ್ನು ಸನ್ಮಾನಿಸಲಾಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯದರ್ಶಿ ಅಜ್ಜಿಪುರ ಮುರಳಿ ಅವರು ನುಡಿ ನಮನ ಸಲ್ಲಿಸಿ, ನಂದೀಶ್ ರವರು ಯುವ ನಾಯಕರಾಗಿ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದು, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಹಾಗೂ ಹುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಫಲವಾಗಿ ಇಂದು ಜನರಿಂದ ಅವಿರೋಧವಾಗಿ ಆಯ್ಕೆಯಾಗಿ ಎಲ್ಲಾ ವರ್ಗದ ಜನರ ವಿಶ್ವಾಸ ಪಡೆದಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಅವರು ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಲಿ ಎಂದು ಹಾರೈಸಿದರು.
ಚಾಮುಲ್ ನಿರ್ದೇಶಕರು ಹಾಗೂ ಹಿರಿಯ ಸಹಕಾರಿಗಳಾದ ಉದ್ದನೂರು ಪ್ರಸಾದ್ ಅವರು ಸಹಕಾರಿ ಕ್ಷೇತ್ರದ ಸವಾಲುಗಳು ಮತ್ತು ಪರಿಹಾರಗಳ ಕುರಿತು ಮಾತನಾಡಿ, ಸಹಕಾರಿ ವ್ಯವಸ್ಥೆ ರಾಜಕೀಯ ಹಿತಾಸಕ್ತಿಗಳ ಒತ್ತಡಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು. ಸಹಕಾರಿ ಸಂಘಗಳನ್ನು ಬಲಪಡಿಸಲು ನಂದೀಶ್ ರವರಂತಹ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಒಡೆಯರ್ ಪಾಳ್ಯ ಗೌಡರು ಸೋಮಶೇಖರ್ ಅವರು ಮಾತನಾಡಿ, ತಮಿಳುನಾಡಿನ ಹೊಂಗಲವಾಡಿ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಒಡೆಯರ್ ಪಾಳ್ಯ ಹಾಗೂ ಹೊಂಗಲವಾಡಿ ಗ್ರಾಮಗಳ ನಡುವಿನ ಅವಿನಾಭಾವ ಸಂಬಂಧ ಮತ್ತು ನಂದೀಶ್ ಅವರ ಬಾಲ್ಯದ ನೆನಪುಗಳನ್ನು ಸ್ಮರಿಸಿದರು.
ಸಿದ್ದಲಿಂಗ ಸ್ವಾಮಿ ಅವರು ಶುಭ ಹಾರೈಸಿ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವೀರಶೈವ ಮಹಾಸಭೆಯ ನಿಕಟ ಪೂರ್ವ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಕಾಮಗೆರೆ ನಟೇಶ್, ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ದೇಶವಳ್ಳಿ ರವೀಶ್, ಹೊಂಗಲವಾಡಿ ಗ್ರಾಮದ ಟೈಲರ್ ಶಿವನಂಕರಣ್ಣ, ಗುರುಪಾದಸ್ವಾಮಿ, ವಿಜಿಯಣ್ಣ ಸೇರಿದಂತೆ ಅನೇಕ ಬಸವ ಅಭಿಮಾನಿಗಳು ಭಾಗವಹಿಸಿದ್ದರು.
ಈ ಶರಣ ಸಂಗಮ ಕಾರ್ಯಕ್ರಮವು ಬಸವ ತತ್ತ್ವಗಳ ಪ್ರಸಾರಕ್ಕೆ ಮತ್ತೊಂದು ಬಲ ನೀಡುವುದರ ಜೊತೆಗೆ ಸಮಾಜದ ಏಕತೆ ಮತ್ತು ಸಹಕಾರಿ ಮನೋಭಾವವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಸವ ಅಭಿಮಾನಿಗಳು ಅಭಿಪ್ರಾಯಪಟ್ಟರು ಇಂತಹ ಕಾರ್ಯಕ್ರಮಗಳು ತಮಿಳುನಾಡಿನ ಗಡಿ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವರದಿ:ಹೊನ್ನೂರು ಪರಮೇಶ್
