ಮಂಡ್ಯ ಜಿಲ್ಲೆಯಲ್ಲಿ ಕೋಮುವಾದದ ಭಾವನೆಗಳಿಲ್ಲ; ರೈತರ ಸಮಸ್ಯೆಗಳಷ್ಟೇ ಇವೆ — ಗಣೇಶೋತ್ಸವವನ್ನು ಸೌಹಾರ್ದಯುತವಾಗಿ ಆಚರಿಸಲು ಜಿಲ್ಲಾಧಿಕಾರಿ ಕರೆ
ನಾಗಮಂಗಲ: ಸೆ :-9 ಮಂಡ್ಯ ಜಿಲ್ಲೆಯಲ್ಲಿ ಕೋಮುವಾದದ ಯಾವುದೇ ಭಾವನೆಗಳಿಲ್ಲ. ಇಲ್ಲಿ ಪ್ರಮುಖವಾಗಿ ರೈತರ ಸಮಸ್ಯೆಗಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಈ ಮಣ್ಣಿನ ಕಾನೂನಿಗೆ ಬೆಲೆ ನೀಡಿ, ಕಾನೂನು-ಸುವ್ಯವಸ್ಥೆಗೆ ಗೌರವ ನೀಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಹೇಳಿದರು.
ಅವರು ಇಂದು ನಾಗಮಂಗಲದ ಬಿಂಡಿಗನವಿಲೆ ರಸ್ತೆಯಲ್ಲಿರುವ ಜಯಮ್ಮ ಕೃಷ್ಣಪ್ಪ ಸಮುದಾಯ ಭವನದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ಹಬ್ಬವನ್ನು ಯಾವುದೇ ಭಯ, ಆತಂಕವಿಲ್ಲದೆ ಸೌಹಾರ್ದಯುತವಾಗಿ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಗಣಪತಿ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು. ಗಣಪತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಪರವಾನಿಗೆಯನ್ನು ಒಂದೇ ದಿನದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
*ಪರವಾನಿಗೆ ಕಡ್ಡಾಯ: ಎಸ್ಪಿ ಶೋಭಾರಾಣಿ*
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಂಘಟನೆಯ ಒಬ್ಬರು 24 ಗಂಟೆಯೂ ಉಪಸ್ಥಿತರಿರುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ದೊಡ್ಡ ಪ್ರಮಾಣದಲ್ಲಿ ಗಣಪತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಅತ್ಯಗತ್ಯ. ಗಣಪತಿ ಪೂಜೆಗೆ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಧ್ವನಿವರ್ಧಕ ಬಳಕೆಗೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಅವಕಾಶವಿದೆ. ರಾತ್ರಿ 10ರ ನಂತರ ಧ್ವನಿವರ್ಧಕ ಬಳಸುವುದರಿಂದ ಹಿರಿಯರು ಹಾಗೂ ಸಣ್ಣ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಚ್ಚರಿಸಿದರು.
ಗಣಪತಿ ಹಬ್ಬವನ್ನು ಎಲ್ಲರೂ ಭಕ್ತಿ, ಸಡಗರ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶೋತ್ಸವದ ಉದ್ದೇಶವೇ ಜನರನ್ನು ಒಗ್ಗೂಡಿಸುವುದಾಗಿದ್ದು, ಹಬ್ಬದ ಸಂದರ್ಭದಲ್ಲಿ ಪರಸ್ಪರ ಸಹೋದರತ್ವ ಮತ್ತು ಶಾಂತಿಯನ್ನು ಕಾಪಾಡಬೇಕು ಎಂದು ತಿಳಿಸಿದರು.
*ರಕ್ಷಣೆ ನೀಡುವಂತೆ ಮನವಿ*
ಇದೇ ಸಂದರ್ಭದಲ್ಲಿ ಶಿಕಾರಿಪುರಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿದ ನವರಂಗ್ ಎಂಬವರು, ತಮ್ಮ ಬುಡಕಟ್ಟು ಹಕ್ಕಿಪಿಕ್ಕಿ ಸಮುದಾಯದ ಸಂಸ್ಕೃತಿ ಹಾಗೂ ಆಚರಣೆಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಅಹವಾಲು ಸಲ್ಲಿಸಿದರು.
ತಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅಡ್ಡಿಯಾಗದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಅವರ ಮನವಿಯನ್ನು ಆಲಿಸಿದ ಪೊಲೀಸ್ ಅಧಿಕಾರಿಗಳು, ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
*ವಿವಿಧ ಸಂಘಟನೆಗಳ ಮುಖಂಡರು ಭಾಗಿ*
ಸೌಹಾರ್ದ ಸಭೆಯಲ್ಲಿ ಗಣಪತಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಸೀದಿ ಮುಖ್ಯಸ್ಥರು, ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದ ತಮ್ಮ ಸಲಹೆ-ಅಹವಾಲುಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಸಭೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ಕುರಿತು ಚರ್ಚೆ ನಡೆಯಿತು.
ಇದೇ ಸಂದರ್ಭದಲ್ಲಿ ತಾಲೂಕು ಪೊಲೀಸ್ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು
