*ಹಾಸನ,ಜಿಲ್ಲೆಯ ಉಗಿನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕಿಂದು ಅವಿಸ್ಮರಣೀಯ ದಿನ.
ಹೌದು ದೇಶದ ಪ್ರಧಾನಿ ಸಹಕಾರ ಸಂಘದದ ಪ್ರಗತಿ ಹಾಗೂ ರೈತ ಪರ ಕಾರ್ಯಗಳಿಗಾಗಿ ಸಂಸ್ಥೆಯನ್ನು ಗುರುತಿಸಿ ಅದರ ಪ್ರತಿನಿಧಿಗಳೊಂದಿಗೆ ನೇರ ವಿಡಿಯೋ ಸಂವಾದ ಮಾಡಿದ ಕ್ಷಣದ ಸಂಭ್ರಮ ಇದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶವನ್ನು ಉದ್ದೇಸಿ ಮಾಡಿದ ಆತ್ಮ ನಿರ್ಭರ್ ಅನ್ನದಾತ ಕುರಿತ ನೇರ ಟಿ.ವಿ. ಸಂವಾದದಲ್ಲಿ ಜಿಲ್ಲೆಯ ಉಗಿನೆ ಪಂಚಾಯತ್ ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಅವರೊಂದಿಗೆ ಮಾತಾನಡಿದರು. ಇದು ಇಡೀ ದೇಶದ ಗಮನ ಸೆಳೆದಿದೆ.
ಭಾಷಾಂತರಕಾರರ ನೆರವಿನೊಂದಿಗೆ ಬಸವೇಗೌಡ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ ಸಂಸ್ಥೆಯ ಪ್ರಾರಂಭ, ಬೆಳವಣಿಗೆ, ಸಾಧನೆ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ರೈತರಿಗೆ 17,500 ಕೋಟಿ ರೂ ಮೊತ್ತದ ಕಿಸಾನ್ ಉಡುಗೊರೆ ನೀಡಿದ್ದ ಸಂದರ್ಭದಲ್ಲಿ ನಡೆಸಿದ ವಿಡಿಯೋ ಸಂವಾದದ ಜಿಲ್ಲೆಯ ರೈತರ ಕೃಷಿ ಸಂಬಂಧಿಸಿದ ವಿಷಯಗಳು, ಸಮಸ್ಯೆಗಳನ್ನು ಆಲಿಸಿದ್ದು ವಿಶೇಷವಾಗಿತ್ತು
.
ಹಾಸನ ಜಿಲ್ಲೆಯ ರೈತರು ಹಾಗೂ ಉಗಿನೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರೊಂದಿಗೆ ಕೃಷಿ ಚಟುವಟಿಕೆಗಳ ಕಾರ್ಯಾಭಿವೃದ್ಧಿ ಕುರಿತು ಸಂವಾದ ನಡೆಸಿ ಮಾತನಾಡಿದ ಅವರು ರೈತರು ಕಿಸಾನ್ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಂವಾದದಲ್ಲಿ ಭಾಗಿಯಾಗಿದ್ದ ಜಿಲ್ಲೆಯ ರೈತರಿಗೆ ತಮ್ಮ ಪರಿಚಯ ಹಾಗೂ ಜಿಲ್ಲೆಯಲ್ಲಿನ ಕೃಷಿ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿಸುವಂತೆ ಕೇಳಿದರು. ಈ ಸಂದರ್ಭದಲ್ಲಿ ಉಗಿನೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾದ ಬಸವೇಗೌಡ ಅವರು ಉತ್ತರಿಸಿ ಕಳೆದ 44 ವರ್ಷಗಳ ಹಿಂದೆ ಸಂಘವನ್ನು ಆರಂಭಿಸಿದ್ದು, 29 ಗ್ರಾಮಗಳ 2,300 ಕಿಸಾನ್ ಕುಟುಂಬಸ್ಥರು ಇದರ ಸದಸ್ಯರಾಗಿದ್ದಾರೆ ಹಾಗೂ ವಾರ್ಷಿಕವಾಗಿ ಸಂಘ 50 ಕೋಟಿ ರೂಗಳ ವಹಿವಾಟು ನಡೆಸುತ್ತದೆ ಎಂದು ವಿವರಿಸಿದರು .
ಜಿಲ್ಲೆಯಲ್ಲಿ ಶುಂಠಿ, ಅಡಿಕೆ, ಮೆಕ್ಕೆಜೋಳ, ಆಲೂಗೆಡ್ಡೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುವುದಾಗಿ ಅವರು ವಿವರಿಸಿದರು.
ಮೋದಿಯವರು ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ನಿಮಗೆ ಏಕೆ ಬಂತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವೇಗೌಡ ಅವರು ರೈತರಿಗೆ ಸ್ಥಳೀಯವಾಗಿ ರಸಗೊಬ್ಬರ, ಭಿತ್ತನೆ ಬೀಜ, ಕಳೆನಾಶಕ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪರಿಕರಗಳು ದೊರೆಯುತ್ತಿರಲಿಲ್ಲ ಹಾಗಾಗಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈಗ ರೈತರಿಗೆ ಈ ಸಂಘದ ವತಿಯಿಂದ ಕೃಷಿ ಸಂಬಂಧಿಸಿದ ವಸ್ತುಗಳ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ರೈತರ ಈ ಉತ್ತಮ ಚಟುವಟಿಕೆಗಳ ಬಗ್ಗೆ ತಿಳಿದ ಪ್ರಧಾನಿ ಮೋದಿಯವರು ಸಂಘದ ವತಿಯಿಂದ ಈಗ ಯಾವ ಯೋಜನೆಯನ್ನು ರೂಪಿಸಿದ್ದಿರಿ ಹಾಗೂ ಅದರಿಂದ ರೈತರಿಗೆ ಯಾವ ರೀತಿಯ ಅನುಕೂಲವಾಗುತ್ತದೆ ಎಂದು ಪ್ರಶ್ನೆಸಿದರು. ಇದಕ್ಕೆ
ಉಗನೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾದ ಬಸವೇಗೌಡ ಅವರು ಗ್ರಾಮದಲ್ಲಿ 1200 ಮೆಟ್ರಿಕ್ ಟನ್ ಅಷ್ಟು ದಾಸ್ತಾನು ಮಾಡಬಹುದಾದ ಗೋದಾಮು ನಿರ್ಮಿಸಲು ಯೋಜಿಸಿದ್ದು, 40 ಲಕ್ಷ ರೂ ವೆಚ್ಚವಾಗಲಿದೆ. ಅದಕ್ಕಾಗಿ ನಬಾರ್ಡ್ ನಿಂದ 32 ಲಕ್ಷ ರೂ ಸಾಲ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಅಲ್ಲದೆ, ಈ ಗೋದಾಮು ನಿರ್ಮಾಣದಿಂದ ಸ್ಥಳೀಯವಾಗಿ ಸುಮಾರು 3,000 ರೈತರಿಗೆ ಉಪಯೋಗವಾಗಲಿದೆ. ರೈತರು ಬೆಳೆಯುವ ಅಡಿಕೆ, ಮೆಕ್ಕೆಜೋಳ ಇನ್ನಿತರೆ ಬೆಳೆಗಳನ್ನು ಉತ್ತಮ ಬೆಲೆ ಸಿಗುವವರೆಗೂ ವ್ಯವಸ್ಥಿತವಾಗಿ ದಾಸ್ತಾನು ಮಾಡಬಹುದು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಕೃಷಿ ಆದಾಯ ಹೆಚ್ಚಲಿದೆ. ರೈತರು ದಾಸ್ತಾನು ಮಾಡಿದ ಬೆಳೆಗೆ ಸಾಲ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ, ಇದರ ನಿರ್ಮಾಣ ಕೆಲಸ ಇನ್ನು 3 ತಿಂಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.
ಬಸವೇಗೌಡ ಅವರು ನೀಡಿದ ಮಾಹಿತಿಯಿಂದ ಸಂತೋಷಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಸ್ಥರನ್ನು ಒಟ್ಟುಗೂಡಿಸಿ ದೂರದೃಷ್ಟಿಯಿಂದ ಸಹಕಾರಿ ಸಂಘದ ಮೂಲಕ ಮಾಡುತ್ತಿರುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಹಾಸನ ಜಿಲ್ಲೆಯ ರೈತರಂತೆ ಕರ್ನಾಟಕದ ಪ್ರತಿಯೊಂದು ಗ್ರಾಮದ ರೈತರು ಮುಂದಾಲೋಚನೆಯಿಂದ ತಮ್ಮ ಸಂಘಗಳ ಮೂಲಕ ಸಹಕಾರದಿಂದ ಕೃಷಿ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿಕೊಂಡು ಮುನ್ನೆಡೆದರೆ ಅನ್ನದಾತರ ಆತ್ಮ ನಿರ್ಭರ್ ಯೋಜನೆ ಯಶಸ್ವಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯ ಮಾತುಗಳನ್ನಾಡಿದರು.


