ಹನೂರು:ಪಟ್ಟಣಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ಸೆ 2 ರವರೆಗೆ ವ್ಯತ್ಯಯ ವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಶಾಸಕ ಎಂ.ಆರ್. ಮಂಜುನಾಥ್ ಮನವಿ ಮಾಡಿದರು.
ಹನೂರು ಪಟ್ಟಣದ ಜನತೆಯನ್ನು ದಶಕಗಳಿಂದ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟು ₹1 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನೀರು ಪೂರೈಸುವ ಪ್ರಮುಖ ಮೂಲವಾದ ಹರಳೆ–ಸಿದ್ದಯ್ಯನಪುರ ಜಾಕ್‌ವೆಲ್‌ನಲ್ಲಿ ₹67 ಲಕ್ಷ ವೆಚ್ಚದಲ್ಲಿ ಹೊಸ ಅತ್ಯಾಧುನಿಕ ಮೋಟಾರ್ ಅಳವಡಿಸಲಾಗುತ್ತಿದೆ. ಇದರ ಜೊತೆಗೆ ₹33 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣ ಯಂತ್ರಗಳನ್ನು ಬದಲಾಯಿಸುವ ಕಾಮಗಾರಿ ಕೈಗೊಳ್ಳಲಾಗಿದೆ.
ಪಟ್ಟಣದ 13 ವಾರ್ಡ್‌ಗಳಿಗೆ ಕಾವೇರಿ ನದಿ ಮೂಲದಿಂದ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಲ್ಪಿಸಲಾಗಿತ್ತು. ಅಂದಿನಿಂದ ಎರಡು ಮೋಟಾರ್‌ಗಳ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಒಂದು ಮೋಟಾರ್ ಸಂಪೂರ್ಣವಾಗಿ ದುರಸ್ತಿಗೊಂಡು ನಿಷ್ಕ್ರಿಯವಾಗಿದ್ದರೆ, ಕಾರ್ಯನಿರ್ವಹಿಸುತ್ತಿದ್ದ 60 ಎಚ್.ಪಿ. ಸಾಮರ್ಥ್ಯದ ಮತ್ತೊಂದು ಮೋಟಾರ್ ಕೂಡ ಪದೇಪದೇ ದುರಸ್ತಿಗೆ ಒಳಗಾಗುತ್ತಿತ್ತು. ಇದರಿಂದ ಪಟ್ಟಣ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ಹೊರೆಯಾಗುವುದರ ಜೊತೆಗೆ ಸಾರ್ವಜನಿಕರಿಗೆ ನಿರಂತರ ನೀರಿನ ಸಮಸ್ಯೆ ಎದುರಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ₹67 ಲಕ್ಷ ವೆಚ್ಚದಲ್ಲಿ ಹೊಸ ಮೋಟಾರ್ ಖರೀದಿಸಿ ಅಳವಡಿಸಲಾಗುತ್ತಿದ್ದು, ಕಾಮಗಾರಿ ಸೆಪ್ಟೆಂಬರ್ 2ರವರೆಗೆ ನಡೆಯಲಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಾವೇರಿ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಕೊಳವೆಬಾವಿ ಹಾಗೂ ಟ್ಯಾಂಕರ್ ನೀರನ್ನು ಮಿತವಾಗಿ ಬಳಸಿಕೊಂಡು ಸಹಕರಿಸಬೇಕು ಎಂದು ಶಾಸಕ ಮಂಜುನಾಥ್ ಮನವಿ ಮಾಡಿದ್ದಾರೆ.
ನೀರಿನ ಮೂಲವಿಲ್ಲದ ವಾರ್ಡ್‌ಗಳಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು.
ಐದು ವರ್ಷ ಕಂಪನಿಯಿಂದಲೇ ಉಚಿತ ನಿರ್ವಹಿಸಲಿದೆ. ಇದರಿಂದ ಪಟ್ಟಣ ಪಂಚಾಯಿತಿಗೆ ನಿರ್ವಹಣಾ ವೆಚ್ಚದ ಹೊರೆಯಾಗುವುದಿಲ್ಲ .
₹33 ಲಕ್ಷ ವೆಚ್ಚದಲ್ಲಿ ಶುದ್ಧೀಕರಣ ಘಟಕದ ಅಭಿವೃದ್ಧಿ
ಕಾವೇರಿ ನದಿಯಿಂದ ಹರಳೆ ಜಾಕ್‌ವೆಲ್ ಮೂಲಕ ಸಿದ್ದಯ್ಯನಪುರಕ್ಕೆ ನೀರು ಪೂರೈಕೆಯಾಗುತ್ತದೆ. ಅಲ್ಲಿ ನೀರನ್ನು ಶುದ್ಧೀಕರಿಸಿದ ಬಳಿಕ ಹನೂರು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಶುದ್ಧೀಕರಣ ಯಂತ್ರಗಳನ್ನು ಬದಲಾಯಿಸದ ಹಿನ್ನೆಲೆಯಲ್ಲಿ ₹33 ಲಕ್ಷ ವೆಚ್ಚದಲ್ಲಿ ಹೊಸ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಪಟ್ಟಣದ ಜನರಿಗೆ ಶುದ್ಧ ಹಾಗೂ ಗುಣಮಟ್ಟದ ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದೆ.
ಜಾಕ್‌ವೆಲ್ ಕಟ್ಟಡಗಳ ನವೀಕರಣಕ್ಕೂ ಕ್ರಮ
ಹರಳೆ ಹಾಗೂ ಸಿದ್ದಯ್ಯನಪುರ ಗ್ರಾಮಗಳಲ್ಲಿರುವ ಹಳೆಯ ಜಾಕ್‌ವೆಲ್ ಕಟ್ಟಡಗಳನ್ನು ಸಹ ನವೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಹರಳೆ ಜಾಕ್‌ವೆಲ್‌ನಲ್ಲಿ ಹಗಲಿರುಳು ಕಾರ್ಯನಿರ್ವಹಿಸುವ ನೀರುಗಂಟಿಗಳ ಅನುಕೂಲಕ್ಕಾಗಿ ವಸತಿಗೃಹ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ.
ಒಟ್ಟಾರೆ, ಹೊಸ ಮೋಟಾರ್ ಅಳವಡಿಕೆ, ಶುದ್ಧೀಕರಣ ಯಂತ್ರಗಳ ಬದಲಾವಣೆ ಸೇರಿದಂತೆ ₹1 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳಿಂದ ಹನೂರು ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎನ್ನಲಾಗಿದೆ .
