Ticker

6/recent/ticker-posts

ಮದ್ಯಪಾನದ ವೇಳೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯ


ಧಾರವಾಡ:- ಜಿಲ್ಲೆಯ ಕಲಘಟಗಿ ತಾಲೂಕಿನ ಕಾರ್ಮಿಕನೊಬ್ಬ ಶಿವಮೊಗ್ಗ ಜಿಲ್ಲೆಯಲ್ಲಿ ಭೀಕರ ಹತ್ಯೆಗೆ ಬಲಿಯಾಗಿದ್ದಾನೆ. ಮದ್ಯಪಾನದ ವೇಳೆ ನಡೆದ ಮಾತಿನ ಚಕಮಕಿ ಕೊನೆಗೆ ಚಾಕು ಇರಿದು ಕೊಲೆ ಮಾಡುವ ಹಂತಕ್ಕೆ ತಲುಪಿದೆ.

 ಘಟನೆ ಬಳಿಕ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಟಿಂಬರ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಇಚ್ಚನಹಳ್ಳಿ ತಾಂಡಾದ ಪರಶುರಾಮ್ ಲಮಾಣಿ ಹತ್ಯೆಯಾಗಿರುವ ಕಾರ್ಮಿಕ.
ಕಳೆದ ಮೇ ತಿಂಗಳಲ್ಲಿ ಮೇಸ್ತ್ರಿ ಲಕ್ಷ್ಮಣ್ ರಾಠೋಡ್ ನೇತೃತ್ವದಲ್ಲಿ ಐವರು ಕಾರ್ಮಿಕರು ಟಿಂಬರ್ ಕೆಲಸಕ್ಕಾಗಿ ಹೊಸನಗರಕ್ಕೆ ತೆರಳಿದ್ದು, ಸೊನಲೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.


ಶನಿವಾರ ರಾತ್ರಿ ಎಲ್ಲರೂ ಒಟ್ಟಾಗಿ ಮದ್ಯಪಾನ ಮಾಡುತ್ತಿದ್ದ ವೇಳೆ, ಸಹ ಕಾರ್ಮಿಕ ಅರುಣ್ ಲಮಾಣಿ ಅವರ ಕುಟುಂಬದ ವಿಚಾರವಾಗಿ ಪರಶುರಾಮ್ ಲಮಾಣಿ ಬುದ್ಧಿಮಾತು ಹೇಳಿದ್ದಾನೆ

 ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು, ಇತರರು ಮಧ್ಯಪ್ರವೇಶಿಸಿ ಜಗಳವನ್ನು ತಾತ್ಕಾಲಿಕವಾಗಿ ಶಮನಗೊಳಿಸಿದ್ದರು.
ಆದರೆ ಕೆಲವೇ ಹೊತ್ತಿನಲ್ಲಿ ಮತ್ತೆ ಜಗಳ ಆರಂಭವಾಗಿ,

 ಆರೋಪಿಗಳಾದ ಪರಶುರಾಮ್ ಶೆಟ್ಟಪ್ಪ ಮತ್ತು ಅರುಣ್ ಲಮಾಣಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪರಶುರಾಮ್ ಶೆಟ್ಟಪ್ಪ ಕುತ್ತಿಗೆಗೆ ಇರಿದ ಪರಿಣಾಮ ಪರಶುರಾಮ್ ಲಮಾಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು,

 ಮೃತದೇಹವನ್ನು ಹೊಸನಗರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವರದಿ: ಮಾರುತಿ ಲಮಾಣಿ