Ticker

6/recent/ticker-posts

*ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ಹೊಸ ಭಾಂದವ್ಯ ದೊಂದಿಗೆ ಜ್ಞಾನವಿಕಾಸ ವೃದ್ಧಿ :ಶಿವರಾಮು ಅಭಿಮತ*

ನಾಗಮಂಗಲ:ಮೇ 30. ರಾಷ್ಟ್ರೀಯ ಸೇವಾ ಯೋಜನೆಗಳಿಂದ ಹೊಸ ಬಾಂಧವ್ಯದೊಂದಿಗೆ ಜ್ಞಾನ ವೃದ್ಧಿ ಯಾಗಲು ಸಾಧ್ಯ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಸಂಯೋಜನಾಧಿಕಾರಿ ಹಾಗೂ ಡೀನ್ ಡಾ ಎ ಟಿ ಶಿವರಾಮು ಅಭಿಪ್ರಾಯ ಪಟ್ಟರು.

ಅವರು ನಾಗಮಂಗಲ ತಾಲ್ಲೂಕಿನ ಹದ್ದಿನಕಲ್ಲು ಬೆಟ್ಟದ ತಪ್ಪಲಿನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಎನ್ಎಸ್ಎಸ್ ವತಿಯಿಂದ ಈ ಕ್ಷೇತ್ರಕ್ಕೆ ಬಂದಿರುವುದೇ ಪುಣ್ಯದ ಸಂಕಲ್ಪ. ಪರಮಪೂಜ್ಯ ಗುರುಗಳ ಆಶೀರ್ವಾದದಿಂದ ಈ ಕಾರ್ಯ ಸಾಧ್ಯವಾಗಿದೆ. ಈ ಕಾರ್ಯಕ್ರಮ ಸಾಂಕೇತಿಕವಾಗಿದ್ದು, ಇದರಿಂದ ನಿಮ್ಮ ಮನದ ಬದಲಾವಣೆ ಆಗಬೇಕಿದೆ. ಸ್ವಚ್ಚತಾ  ಅಭಿಯಾನ ಮನದಾಳದಿಂದ ನಡೆಯದೆ ಪ್ರಚಾರಕ್ಕೆ ಆಗುವಂತದ್ದಲ್ಲ. ದೇವಸ್ಥಾನ ಆವರಣವನ್ನು ನಮ್ಮ ಮನೆ ಅಂದುಕೊಂಡರೆ ಮಾತ್ರ ಇಂದಿನ ಶ್ರಮ ಸಾರ್ಥಕ. ಇಂಥ ಕಾರ್ಯ ನಿರ್ವಹಣೆಯಿಂದ ಮನಸ್ಸು ಹೊಸತನಕ್ಕೆ ತಿರುಗಬೇಕಾದರೆ ಅನುಭವ ನೈಜವಾಗಿರಬೇಕು, ಶಿಕ್ಷಣ ಎಂಬುದು ಪರಿಕಲ್ಪನೆಯ ನೋಟದಲ್ಲಿ ಬದಲಾಗುವ ಜವಾಬ್ದಾರಿ, ಸಾಧನೆಯ ಹಂತಕ್ಕೆ ತಲುಪಬೇಕಾದರೆ ಸಂವಹನ ಎಂಬುದು ನಮ್ಮ ಹೇಳಿಕೆಯ ದಾಟಿಯಲ್ಲಿರಬೇಕು. ಈ ಕ್ಷೇತ್ರದ ಸೇವಾ ಸಮಿತಿಯ ಪದಾಧಿಕಾರಿಗಳ ಪರಿಶ್ರಮ ನಿಜಕ್ಕೂ ಶ್ಲಾಘನೀಯ.
21ನೇ ಶತಮಾನದ ವಿಶಿಷ್ಟ ಕಲಿಕಾ ಕೌಶಲ್ಯಗಳೇ ಜೀವನ ಕೌಶಲ್ಯ ಗಳನ್ನಾಗಿಸುವುದೇ ಎನ್ನೆಸ್ಸೆಸ್.  ನಿಮ್ಮ ಈ ಶ್ರಮದಾನದ ಹಿಂದೆ ಕ್ಷೇತ್ರದ ಮಹಿಮೆಯನ್ನು ಅರಿಯುವ ವಿಶೇಷ ಅವಕಾಶವಿದೆ. ಹಿರಿಯರ ಪ್ರಕಾರ ಭಾಂದವ್ಯದ ಶ್ರೀಮಂತಿಕೆ ಹೊಸ ಜನರ ಪರಿಚಯವು ಜ್ಞಾನ ವಿಕಾಸಕ್ಕೆ ದಾರಿ ಮಾಡಿಕೊಡುತ್ತದೆ.  ಸೇವಾ ಮನೋಭಾವ ಬೆಳೆಸಿಕೊಂಡರೆ ಸಂಸ್ಕೃತಿ ವಿನಿಮಯ ದೊಂದಿಗೆ ದೇಹ ಮತ್ತು ಮನಸ್ಸಿನ ನಡುವಿನ ಆತ್ಮದ ಸಂಸ್ಕಾರ ವೃದ್ದಿಯಾಗುತ್ತದೆ. 

ಕ್ಷೇತ್ರದ ಸೌಂದರ್ಯ ಹೆಚ್ಚಳ ಹಾಗೂ ಭಕ್ತರ ಅನುಕೂಲಕ್ಕಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯ ಮತ್ತು ಸೇವಾ ಟ್ರಸ್ಟ್ ಸಹಯೋಗದಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಸಂಕಲ್ಪ ತೊಡಲಾಯಿತು. ಈ ಕಾರ್ಯದಲ್ಲಿ ಎಲ್ಲರೂ ಸಕಾರಾತ್ಮಕವಾಗಿ ಸಹಕರಿಸೋಣ ಎಂದರು.

 ಹದ್ದಿನಕಲ್ಲು ಸೇವಾ ಸಮಿತಿಯ ಅಧ್ಯಕ್ಷರಾದ ಹರೀಶ್ಚಂದ್ರ ಮಾತನಾಡಿ ವಿಶ್ವವಿದ್ಯಾಲಯದ ಎನ್ ಎಸ್ ಘಟಕದ ಸ್ವಯಂಸೇವಕರು ಕ್ಷೇತ್ರಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಹಾಗೂ ವಿವಿದೆಡೆಯಲ್ಲಿ ಕಸದ ತೊಟ್ಟಿಗಳನ್ನು ನಿರ್ಮಿಸಿರುವುದು ಶ್ಲಾಘನೀಯ. ಈ ಕಾರ್ಯಕ್ಕಾಗಿ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸುತ್ತೇವೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಕೃಪೆಯೊಂದಿಗೆ ಈ ಬಾಂಧವ್ಯ ನಿರಂತರವಾಗಿ ಮುಂದುವರೆಯಲಿ, ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಿರುವ ಉದ್ಯಾನವನದ ವಿನ್ಯಾಸ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಬೇಕು, ಕ್ಷೇತ್ರದ ಹನುಮಂತರಾಯ ಸ್ವಾಮಿ ನಿಮ್ಮೆಲ್ಲರಿಗೂ ಒಳಿತು ಮಾಡಲಿ ಎಂದರು. 
ಸೇವಾ ಪರಿಸರದಲ್ಲಿ ಕಸ ಹಾಕಲು ವಿಶ್ವವಿದ್ಯಾಲಯದ ವತಿಯಿಂದ 10 ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ನೂರು ಸ್ವಯಂಸೇವಕರಿಂದ ಸ್ವಚ್ಚತಾ ಅಭಿಯಾನವನ್ನು ಕೈಗೊಂಡು ಪರಿಸರವನ್ನು ಶುಚಿ ಗೊಳಿಸಲಾಯಿತು. ಎನ್ ಎಸ್ ಎಸ್ ಸಂಯೋಜನಾಧಿಕಾರಿ ನೇತೃತ್ವದಲ್ಲಿ ನಡೆದ ಈ ಅಭಿಯಾನವನ್ನು ಮನಸಾರೆ ಶ್ಲಾಘಿಸಿದ ಕ್ಷೇತ್ರದ ಸೇವಾ ಟ್ರಸ್ಟ್  ಪದಾಧಿಕಾರಿಗಳು ಹಾಗೂ ಭೈರಸಂದ್ರ ಗ್ರಾಮಸ್ಥರು ಪ್ರೋತ್ಸಾಹ ನೀಡುತ್ತಾ ವಿದ್ಯಾರ್ಥಿಗಳೊಂದಿಗೆ ಸ್ವಚ್ಚತಾ ಕಾರ್ಯದಲ್ಲಿ ಕೈ ಜೋಡಿಸಿದರು. 

ಈ ಸ್ವಚ್ಚತಾ ಅಭಿಯಾನದಲ್ಲಿ  ದೇವಸ್ಥಾನ ಸಮಿತಿಯ ಕಾರ್ಯದರ್ಶಿ ರವಿ, ಪದಾಧಿಕಾರಿ ಪ್ರಕಾಶ್,   ಭೈರಸಂದ್ರ ಗ್ರಾಮಸ್ಥರಾದ ರಘು, ಚಂದ್ರು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಸಿ ಎಲ್ ಶಿವಣ್ಣ, ಕಾಂತರಾಜು ಎಸ್, ಡಾ. ಪ್ರಕಾಶ್ ಕುಮಾರ್, ಕಲಾ ಶಿಕ್ಷಕ ಬೊಮ್ಮರಾಯಸ್ವಾಮಿ, ಜಿ. ಹಂಪೇಶ್ ಹಾಗೂ ಸ್ವಯಂಸೇವಕರಿದ್ದರು .