ನಾಗಮಂಗಲ:ಮಾ17.ಸೂಕ್ಷ್ಮ ಸಂವೇದನೆಯ ಭಾವನಾತ್ಮಕ ನೆಲೆಯ ಸ್ತ್ರೀ ಸಮಾಜದ ಕಣ್ಣು ಸ್ಪೂರ್ತಿಯ ಸೆಲೆ ಎಂದು ಸಿನಿಮಾ ಹಾಗೂ ಕಿರುತೆರೆ ನಟಿ ಪದ್ಮಜಾ ರಾವ್ ಅಭಿಪ್ರಾಯ ಪಟ್ಟರು.
ನಾಗಮಂಗಲ ತಾಲ್ಲೂಕಿನ ಬಿಜಿ ನಗರ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ, ಪಿಯು ಕಾಲೇಜು ಹಾಗೂ ಮಾಡೆಲ್ ಪಬ್ಲಿಕ್ ಸ್ಕೂಲ್ ವತಿಯಿಂದ "ಸಂವರ್ಧಿನಿ" ಶೀರ್ಷಿಕೆಯಡಿ 'ಯುವಾಲಯ' ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನನ್ನ ವಿದ್ಯಾಭ್ಯಾಸಕ್ಕೆ ಶ್ರೀಮಠದ ಆಶ್ರಯ ಸಿಗುತ್ತಿದ್ದರೂ ಸ್ವಾಮೀಜಿಯವರ ಕೃಪಾಕಟಾಕ್ಷವು ನೇರವಾಗಿ ವೇದಿಕೆಗೆ ಕರೆಸಿದೆ ಇದು ನನ್ನ ಪೂರ್ವಜನ್ಮದ ಪುಣ್ಯ. ಪ್ರತಿಯೊಬ್ಬ ಯಶಸ್ವೀ ಪುರುಷನ ಪ್ರೇರಕ ಶಕ್ತಿ ಮಹಿಳೆಯನ್ನು ಗೌರವಿಸಿ ಪ್ರೋತ್ಸಾಹಿಸುವ ಈ ಸಂದರ್ಭದಲ್ಲಿ ನನ್ನ ಉಪಸ್ಥಿತಿ ಧನ್ಯತಾ ಭಾವ ಮೂಡಿಸಿದೆ. ಈ ಕ್ಷಣದಲ್ಲಿ ನನ್ನನ್ನು ಅಭಿನಯ ಕ್ಷೇತ್ರಕ್ಕೆ ಕರೆತಂದ ಗುರು ವೈಶಾಲಿ ಕಾಸರವಳ್ಳಿಯವರನ್ನು ಮನಸಾ ಸ್ಮರಿಸುತ್ತೇನೆ ಎಂದರು.
ಇಂದಿನ ಯುಗದಲ್ಲಿ ಪ್ರತಿ ಮಹಿಳೆಯೂ ಉತ್ತಮ ವಿದ್ಯಾಭ್ಯಾಸದಿಂದ ಸೂಕ್ತ ನೌಕರಿ ಪಡೆದು ಸ್ವಾವಲಂಬಿಗಳಾಗಬೇಕು ಎನ್ನುತ್ತಾ ತಾವು ಅಭಿನಯಿಸುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯ ಅತ್ತೆ ಪಾತ್ರವನ್ನು ಮಹಿಳಾ ದಿನಾಚರಣೆಗೆ ಸಮೀಕರಿಸಿ ಸ್ತ್ರೀ ಮಹತ್ವವನ್ನು ಸಾದರಪಡಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್ ಎನ್ ಶ್ರೀಧರ ಮಾತನಾಡಿ ಸಂಸ್ಥೆಯ ಆಯಾ ಗಳನ್ನು ಸನ್ಮಾನಿಸಿರುವುದು ಮಹಿಳಾ ಸಮುದಾಯಕ್ಕೆ ಗೌರವ ನೀಡಿದಂತಾಗಿದೆ. ಪುರಾಣದಿಂದಲೂ ಅರ್ಧನಾರೀಶ್ವರ ಪರಿಕಲ್ಪನೆಯನ್ನು ಪಾಲಿಸುತ್ತಿದ್ದೇವೆ, ಇದರರ್ಥ ಹೆಣ್ಣಿನ ಸಾಮರ್ಥ್ಯವನ್ನು ಸಮಾನವಾಗಿ ಕಾಣುವ ದ್ಯೋತಕ. ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿತರೆ ಇತರರನ್ನು ಗೌರವಿಸುವ ಭಾವನೆ ಮೂಡುತ್ತದೆ. ಗಂಡು ಮಕ್ಕಳಿಗೆ ತಾಯಿಯೊಂದಿಗಿರುವ ಆತ್ಮೀಯತೆ ತಂದೆಯ ಜೊತೆ ಇರುವುದಿಲ್ಲ. ವಚನಗಾರ್ತಿ ಸಂಚಿಹೊನ್ನಮ್ಮನ ವಚನವನ್ನು ಸಮೀಚೀನಗೊಳಿಸಿ ಹೆಣ್ಣು ಪ್ರಕೃತಿಗೆ ಹತ್ತಿರವಾದ್ದರಿಂದ ತಕ್ಷಣ ಅರಳುತ್ತಾರೆ, ಆದ್ದರಿಂದ ಹೆಣ್ಣನ್ನು ಗೌರವಿಸಿ ಸಮಾನವಾಗಿ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳೋಣ ಎಂದರು.
ಮುಖ್ಯ ಅತಿಥಿ ಬೆಂಗಳೂರು ಎಂಇಎಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಹೆಚ್ ಎಸ್ ಗಣೇಶ ಭಟ್ ಮಾತನಾಡಿ ವಿದ್ಯೆ ಕಲಿತ ಹೆಣ್ಣು ಸಮಾಜದ ದಾರಿದೀಪ. ರಾಷ್ಟ್ರಕವಿ ಕುವೆಂಪು ಅವರ ವಾಣಿಯಂತೆ ಮಾನವೀಯತೆ ದೊಡ್ಡದು, ಇಲ್ಲಿ ಯಾರೂ ಮುಖ್ಯರಲ್ಲ ಯಾರು ಅಮುಖ್ಯರಲ್ಲ. ಮನಸ್ಸಿನ ನಿಗ್ರಹದಲ್ಲೂ ಹೆಣ್ಣಿನ ಶಕ್ತಿ ಗಂಡಸಿಗೆ ಇಲ್ಲ. ಒಬ್ಬ ತಂದೆ ಹೇಳುತ್ತಾನೆ ಗಂಡು ಹುಟ್ಟಿದರೆ ಅವನಿಗೆ ಅನೇಕ ವಿಷಯಗಳನ್ನು ಕಲಿಸಬೇಕು ಆದರೆ ಹೆಣ್ಣು ಹುಟ್ಟಿದರೆ ಆ ಮಗುವೇ ನನಗೆ ಎಲ್ಲ ಕಲಿಸುತ್ತದೆ ಎಂದು. ತನ್ನ ಕಾಲ ಮೇಲೆ ನಿಂತ ಹೆಣ್ಣಿಗೆ ದೃಢತೆಯನ್ನು ಕಾಪಾಡುವ ಶಕ್ತಿ ಇರುತ್ತದೆ. ಬುದ್ಧನ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು ಏಕೆಂದರೆ ಸ್ತ್ರೀ-ಸ್ತ್ರೀ ಸಂಬಂಧಕ್ಕಿಂತ ಸ್ತ್ರೀ-ಪುರುಷ ಸಂಬಂಧ ಗಟ್ಟಿಯಾಗಿಸಬೇಕು ಎಂಬುದನ್ನು ಬೋಧಿಸುತ್ತಾನೆ. ಇಂದಿರಾಗಾಂಧಿ ಆದಿಯಾಗಿ ದೇಶದ ಪ್ರಮುಖ ಮಹಿಳಾ ಶಕ್ತಿಯನ್ನು ಕವಿ ಸಾಲುಗಳನ್ನು ಉಲ್ಲೇಖಿಸಿ ಮಾತನಾಡಿದರು.
ಗೌರವ ಅತಿಥಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಹಾಗೂ ಡೀನ್ ಡಾ ಎ ಟಿ ಶಿವರಾಮು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸೂಕ್ಷ್ಮ ಹಾಗೂ ಸೌಜನ್ಯದ ಸಹಕಾರ ಮೂರ್ತಿ ತಾಯಿ, ಸೋದರಿ, ಸಹಪಾಟಿ ಗೆಳತಿಯರ ಸ್ತ್ರೀ ಸಂವೇದನಾ ಶಕ್ತಿಯ ಮಾತೃಸ್ವರೂಪವನ್ನು ತಮ್ಮ ಅನುಭವದ ವಿಶೇಷತೆಗಳಲ್ಲಿ ವಿವರಿಸಿದರು. ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರಲ್ಲೂ ಬೆಳೆಸಿದ್ದ ತಾಯ್ತನದ ಮಾತೃ ಹೃದಯವನ್ನು ಮನಸಾ ಸ್ಮರಿಸಿದರು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ನಾಗಮಂಗಲ ಶಾಖಾ ಮಠದ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಆಶೀರ್ವಚನ ನೀಡಿ ನಮ್ಮ ಶ್ರೀಮಠದ ಪರಮಪೂಜ್ಯ ಸ್ವಾಮೀಜಿಯವರು ಮಾತ್ರ ಹೃದಯಗಳು, ಇದಕ್ಕೆ ಸಾಕ್ಷಿಯಾಗಿ ನಮ್ಮೆಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಅತಿಹೆಚ್ಚು ಮಹಿಳಾ ಸಂಪದ. ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ನನ್ನ ಪ್ರೇರಕ ಶಕ್ತಿಯಾಗಿ ಮಾರ್ಗದರ್ಶನ ಮಾಡಿ ಸಾಧುವಾಗಿಸಿದ ವಿದೇಶದಿಂದ ಭಾರತಕ್ಕೆ ಬಂದು ಹಿಂದೂ ವಾಗಿ ಪರಿವರ್ತನೆಗೊಂಡ ಕ್ರೈಸ್ತ ಮಹಿಳೆ ನನ್ನ ಪೂರ್ವಾಶ್ರಮದ ತಾಯಿ ಎಂದೇ ಭಾವಿಸುತ್ತೇನೆ ಎಂದರು. ವಿವಿಧ ನಿದರ್ಶನಗಳ ಮೂಲಕ ಸ್ತ್ರೀ ಮಹತ್ವವನ್ನು ವ್ಯಾಖ್ಯಾನಿಸಿದರು.
ಪುರಾಣ ಇತಿಹಾಸ ಹಾಗೂ ಕಾವ್ಯ ಸಂಸ್ಕೃತಿಗಳಲ್ಲಿ ಮಹಿಳಾ ಸ್ಥಾನಮಾನ ಕುರಿತು ವಿಶೇಷ ಚಿಂತನ ನುಡಿಗಳನ್ನು ಬಿ.ಇಡಿ ಪ್ರಶಿಕ್ಷಣಾರ್ಥಿ ಹರಿಪ್ರಸಾದ್ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಯಾ ಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಟಿ ಎನ್ ಶಿಲ್ಪಾ, ಮಾಡೆಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ವಿ ಪುಟ್ಟಸ್ವಾಮಿ, ಕಾರ್ಯಕ್ರಮ ಸಂಯೋಜಕಿ ಡಾ. ಸೌಮ್ಯ ಎನ್ನೆಸ್, ಅಧ್ಯಾಪಕರು ಹಾಗೂ ಇತರರಿದ್ದರು.
