Ticker

6/recent/ticker-posts

*ಭಾರತೀಯ ಗಣತಂತ್ರ ರೂಪಗೊಂಡ ನಮ್ಮ ಹಬ್ಬ: ನಿವೃತ್ತ ಸೇನಾಧಿಕಾರಿ ಶಿವಕುಮಾರ್*

ನಾಗಮಂಗಲ.ಜ26.ಹಲವು ಸಂಸ್ಥಾನಗಳು ಒಗ್ಗೂಡಿ ಭಾರತ ಗಣತಂತ್ರವಾದ ಸುದಿನವಿದು, ಪದ್ಮ ಪ್ರಶಸ್ತಿಯನ್ನು ಪ್ರದಾನಿಸುವ ಗರಿಮೆಯ ದಿನವೇ ಗಣರಾಜ್ಯೋತ್ಸವ ಎಂದು ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಎಂ ಆರ್ ಶಿವಕುಮಾರ್ ಅಭಿಪ್ರಾಯ ಪಟ್ಟರು. 

ಅವರಿಂದು ನಾಗಮಂಗಲ ತಾಲೂಕಿನ ಬಿ.ಜಿ ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್, ಪಿಯು ಕಾಲೇಜ್ ಹಾಗೂ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಪಾಂಚಜನ್ಯ ಆವರಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

1949ರಲ್ಲಿ ಸಂವಿಧಾನ ರಚನೆಯಾದರೂ  26 ಜನವರಿ1950 ರಲ್ಲಿ ಅನುಷ್ಠಾನಗೊಂಡಿತು. ಈ ದಿನವನ್ನು ಹೆಮ್ಮೆಯ ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದರೂ ಹಲವು ಸಂಸ್ಥಾನಗಳ ಆಳ್ವಿಕೆಯಿದ್ದು ಒಗ್ಗಟ್ಟಿನ ಕೊರತೆಯಿತ್ತು. ಅಂತಹ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಗಣತಂತ್ರ ರೂಪುಗೊಳ್ಳಲು ಶ್ರಮ ಪಟ್ಟವರಲ್ಲಿ ಮೊದಲಿಗರಾಗಿ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಗಣರಾಜ್ಯವಾಗಿಸಿದರು.
ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಕರ್ತವ್ಯಗಳು ಮತ್ತು ಹಕ್ಕುಗಳನ್ನು ನೀಡಲು ಭಾಜನವಾಯಿತು. ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಸುದಿನ. ಏಕೆಂದರೆ ಇಂದು ಹುತಾತ್ಮ ಸೈನಿಕರಿಗೆ, ಶೌರ್ಯ ಮೆರೆದ ಹಾಗೂ ಗಮನೀಯ ಸಾಧಕರಿಗೆ ಪದ್ಮ ಪ್ರಶಸ್ತಿಯ ಗೌರವಗಳನ್ನು ನೀಡುವ ಪರಿಪಾಠ ರೂಢಿಯಲ್ಲಿದೆ. ಇಲ್ಲಿಯೂ ಅಂತಹ ವಿಶೇಷ ಸಂದರ್ಭವನ್ನು ಗಮನಿಸಿದ್ದೇನೆ.

 ನಮ್ಮ ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯ ಸಾಗುತ್ತಿದೆ. ಆ ಮೂಲಕ ಶಾಂತಿ ಸೌಹಾರ್ದತೆಯನ್ನು ಹಂಚುವ ಕಾಯಕ  ನಿರಂತರವಾಗಿ ನಡೆಯುತ್ತಿದೆ. ಸೈನಿಕರು ರಕ್ಷಣೆಯ ಜೊತೆಗೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ರಾಷ್ಟ್ರ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಸೈನಿಕರಿಗೆ ನೀಡಿದ ಸನ್ಮಾನ ರಾಷ್ಟ್ರವನ್ನೇ ಗೌರವಿಸಿದಂತಾಗಿದೆ.  ನಿಮ್ಮ ಒಂದು ಸೆಲ್ಯೂಟ್ ಸೈನಿಕರಿಗೆ ಶಕ್ತಿಯ ಸ್ಪೂರ್ತಿ ತುಂಬುತ್ತದೆ ಚಲಿಸುತ್ತಿರುವ ವಾಹನಕ್ಕೆ ಧೈರ್ಯ ನೀಡುತ್ತದೆ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜ ವಿಜ್ಞಾನಗಳು ವಿಭಾಗದ ಡೀನ್ ಹಾಗೂ ಆಡಳಿತಾಧಿಕಾರಿ ಡಾ ಎ ಟಿ ಶಿವರಾಮು ಮಾತನಾಡಿ ಇಂದು ನಮ್ಮೊಂದಿಗಿರುವ ಮಾಜಿ ಸೈನಿಕರಾದ ಶಿವಕುಮಾರ್ ಅವರು ನೀಡಿದ ವಿಶಿಷ್ಟ ಸಂದೇಶವು ನಮ್ಮೆಲ್ಲರಲ್ಲೂ ಭಾರತೀಯತೆ ಮತ್ತು ರಾಷ್ಟ್ರಗೌರವವನ್ನು ಇಮ್ಮಡಿಸಿದೆ. ಅಂದು ರಾಷ್ಟ್ರ ನಾಯಕರು ತಂದುಕೊಟ್ಟ ಸ್ವಾತಂತ್ರ್ಯವನ್ನು ಮತ್ತು ಸಂವಿಧಾನದ ಆಶಯಗಳನ್ನು ಸಂಭ್ರಮಿಸುವ ದಿನವಾಗಿದೆ. ಕೇವಲ ಪದಗಳಿಗೆ ಆದ್ಯತೆ ನೀಡದೆ ನ್ಯಾಯ ಸ್ವಾತಂತ್ರ್ಯ ಸಮಾನತೆ ಗಳಿಗೆ ಪ್ರಶಸ್ತವನ್ನು ನೀಡುವ ಮೌಲ್ಯಗಳನ್ನು ಪರಿಪಾಲಿಸುವ ಸೂತ್ರವೇ ಗಣರಾಜ್ಯ. ವಿದ್ಯಾರ್ಥಿಗಳು ಸಂವಿಧಾನವನ್ನು ಅರ್ಥೈಸಿಕೊಂಡು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 

ಇದು ಪರೀಕ್ಷಾ ದೃಷ್ಟಿಯಿಂದಲ್ಲದೆ ಅಧ್ಯಾಪಕರ ಹಾಗೂ ಭಾರತೀಯ ನಾಗರಿಕನ ಜವಾಬ್ದಾರಿಯಾಗಬೇಕು. ಮೌಲ್ಯಗಳು ರಾಷ್ಟ್ರದ ಅಡಿಪಾಯವಾಗಿ ಪಾಲನೆಯಾಗಬೇಕೆಂದು ಮಹಾ ಸ್ವಾಮೀಜಿಯವರ ಅಭಿಪ್ರಾಯವಾಗಿದೆ. ಇದು 21ನೇ ಶತಮಾನದ ನಿಮ್ಮೆಲ್ಲರ ಕೊಡುಗೆಯಾಗಲಿ ಎಂದರು.

 ಆಧ್ಯಾತ್ಮಿಕತೆ, ಪ್ರಾಕೃತಿಕತೆ, ಮಾನಸಿಕ, ಸಾಮಾಜಿಕ ನೈತಿಕ ಹೊಣೆಗಳು ಪ್ರಮುಖ ಪಾತ್ರವನ್ನು ವಹಿಸುವ ಯುಗದಲ್ಲಿ ಭಾವನಾತ್ಮಕ ಸ್ಥಿರತೆ ಮತ್ತು ಅಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಯಶಸ್ಸು ಫಲಿತಾಂಶವಲ್ಲ ಅದೊಂದು ಪ್ರಯಾಣ ಪ್ರತಿಕ್ಷಣವನ್ನು ಆನಂದಿಸಿ. ಏಕೆಂದರೆ ಯಶಸ್ ಎನ್ನುವುದು ನಿಮ್ಮೆಲ್ಲ ಪ್ರಯತ್ನಗಳ ಕೊಡುಗೆಯಾಗಿದೆ. ಭಾರತೀಯ ಸಂಸ್ಕೃತಿ ಮೌಲ್ಯಗಳ ಮಹತ್ವವನ್ನು ಅರಿತು ಶ್ರೇಷ್ಠ ಪರಂಪರೆಯ ಮುನ್ನಡೆಗೆ ಅಡಿ ಇಡೋಣ, ಪ್ರಜ್ಞಾವಂತ ನಾಗರಿಕರಾಗಿ ದೇಶದ ಪ್ರಗತಿಗೆ ಕೊಡುಗೆಯಾಗೋಣ ಎಂದರು.

ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರೇಟ್ ಇಂಡಿಯನ್ ಎಂಬ ಮಾತು ವಿಶ್ವದೆಲ್ಲೆಡೆ ಹಬ್ಬಿದೆ. ಇಂತಹ ಶ್ರೇಷ್ಠ ಭಾರತದಲ್ಲಿ ಹುಟ್ಟಿದ ನೋವು ಪುಣ್ಯವಂತರು ಇಂತಹ ದೇಶಕ್ಕೆ ಗೌರವದ ಸೆಲ್ಯೂಟ್. ಇಲ್ಲಿ ನಾವು ಜವಾಬ್ದಾರಿಯಿಂದ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. 

ನಮ್ಮ ರಾಷ್ಟ್ರೀಯ ಹಬ್ಬಗಳು ದೇಶಾಭಿಮಾನವನ್ನು ಮೂಡಿಸುತ್ತವೆ. ನಮ್ಮ ಅನರ್ಘ್ಯ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಂತಹ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಅಸಂಖ್ಯ ರಾಷ್ಟ್ರ ನಾಯಕರ ನೆನೆಯುವ ಸಂದರ್ಭ ಇದು, ಆ ಮಹನೀಯರು ನೀಡಿದ ಭಾರತದಲ್ಲಿ  ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಮುನ್ನಡೆಯಬೇಕಿದೆ. ಆ ನಿಟ್ಟಿನಲ್ಲಿ ಸಾಗಿ ಭವ್ಯ ಭಾರತವನ್ನು ನಿರ್ಮಿಸಲು ಹೆಜ್ಜೆ ಇಡೋಣ, ಎಲ್ಲರಿಗೂ ಶುಭಾಶಯಗಳು ಎಂದರು.

ವಿದ್ಯಾರ್ಥಿಗಳಾದ ಮನ್ವಿತಾ, ಹರಿಪ್ರೀತ್ ಹಾಗೂ ಪ್ರೇಕ್ಷಾ ಗಣರಾಜ್ಯೋತ್ಸವದ ಹಿನ್ನೆಲೆಯನ್ನು ಕುರಿತು ಮೂರು ಭಾಷೆಗಳಲ್ಲಿ ಮಾತನಾಡಿದರು. 

ಇತ್ತೀಚೆಗೆ ಪಿ ಎಚ್ ಡಿ ಪದವಿ ಪಡೆದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎ ಸಿ ದೇವಾನಂದ್, ಸೌಮ್ಯ ಎನ್ ಎಸ್ ಹಾಗೂ ಎಂ ಶೋಭಾ ರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಂಸತ್ ಅಧಿವೇಶನ ಹಾಗೂ ಕ್ರೀಡಾ-ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಟಿ ಎನ್ ಶಿಲ್ಪ, ಶಿಕ್ಷಣ ಮಹಾವಿದ್ಯಾಲಯದ ಎ ಎಚ್ ಗೋಪಾಲ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸಿ ಎಲ್ ಶಿವಣ್ಣ, ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ಮಾಡಲ್ ಪಬ್ಲಿಕ್ ಶಾಲೆಯ ಅಧ್ಯಾಪಕರು ಹಾಜರಿದ್ದರು.