Ticker

6/recent/ticker-posts

*ಸಂಸ್ಕಾರಯುತ ಶಿಕ್ಷಣದ ಜೊತೆಗೆ ಗುರುವಿನ ಮಾರ್ಗದರ್ಶನ ಅಗತ್ಯ: ಸಿನಿಮಾ ನಟ ಹನುಮಂತ ಗೌಡ*

ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಶಾಲೆಯ 10ನೇ ವರ್ಷದ ವಾರ್ಷಿಕೋತ್ಸವ

ನಾಗಮಂಗಲ:ಜ31.ನೆನ್ನೆಯನ್ನು (ಭೂತಕಾಲ) ನೆನೆದು ಇಂದು ಜೀವಿಸಿದರೆ ನಾಳೆಯ ಅರಿವು ಮೂಡುತ್ತದೆ ಇದಕ್ಕೆ ಸಂಸ್ಕಾರವಂತ ಶಿಕ್ಷಣದ ಜೊತೆಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಸಿನಿಮಾ ಮತ್ತು ಕಿರುತೆರೆ ನಟ ಹನುಮಂತಗೌಡ ಅಭಿಪ್ರಾಯ ಪಟ್ಟರು. 

ಅವರು ಇಂದು ನಾಗಮಂಗಲ ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಸಭಾಂಗಣದಲ್ಲಿ ನಡೆದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ10ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 
ಕೂಡು ಕುಟುಂಬದಲ್ಲಿ ಬೆಳೆದ ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಬೆಳಗ್ಗೆ ಶಾಲೆಗೆ ಹೊರಟರೆ ಹಿಂತಿರುಗಿ ರಾತ್ರಿ ಊಟ ಮಾಡಿದ್ದಷ್ಟೇ ಪೋಷಕರಿಗೆ ಗೊತ್ತಾಗುತ್ತಿತ್ತು ಆದರೆ ಈಗ ಕಾಲ ಬದಲಾಗಿದೆ, ಮಕ್ಕಳ ಸರ್ವಾಂಗೀಣ ಪ್ರಗತಿಯನ್ನು ಪ್ರಧಾನ ವಾಗಿಸಿಕೊಂಡ ಪೋಷಕರ ಜವಾಬ್ದಾರಿ, ಶ್ರಮ, ಅತ್ಯಂತ ಕಾಳಜಿಯಿಂದ ಸಾಗುತ್ತಿದೆ. ತುಂಬ ಕುಟುಂಬದಲ್ಲಿ ನಾವು ಹಿರಿಯರನ್ನು ನೋಡಿ ಕಲಿತಿದ್ದೇವೆ, ಇಂದು ತಂತ್ರಜ್ಞಾನ ಆಧಾರಿತ ಸಾಮಾಜಿಕ ಮಾಧ್ಯಮಗಳೇ ಪೂರಕ ಮತ್ತು ಮಾರಕವಾಗಿವೆ. ಶಿಕ್ಷಣದಿಂದ ಕೇವಲ ಅಂಕ ವೀರರಾಗದೆ ಶ್ರೇಷ್ಠ ಸಂಸ್ಕೃತಿ ಸಂಸ್ಕಾರಗಳನ್ನು ಪ್ರೇರೇಪಿಸಿ ಮುನ್ನಡೆಸಿದರೆ ಇಡೀ ಪ್ರಪಂಚಕ್ಕೆ ವಿಶಿಷ್ಟ ಮಾನವೀಯ ಕಾಣಿಕೆಯನ್ನು ನೀಡಬಹುದು, ಈ ದೆಸೆಯಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದರು.

 ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪೂಜ್ಯ ಗುರುವರೇಣ್ಯರ ಆಶೀರ್ವಾದದ ಹಾರೈಕೆಯಲ್ಲಿ ಬೆಳೆಯುತ್ತಿರುವ ನೀವು ಪುಣ್ಯವಂತರು, ನಿಮ್ಮೆಲ್ಲರ ಬದುಕು ಹಸನಾಗಲಿ ಯಶಸ್ವಿಯಾಗಲಿ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ನಾಗಮಂಗಲ ಶಾಖಾ ಮಠದ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಆಶೀರ್ವಚನ ನೀಡಿ 'ಹಸಿದ ಹೊಟ್ಟೆಗೆ ವೇದಾಂತ ಸಲ್ಲದು' ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಸ್ಮರಿಸಿಕೊಂಡರು. 'ವಿದ್ವಾನ್ ಸರ್ವತ್ರ ಪೂಜ್ಯತೆ' ಎಂಬ ಮಹಾತೊಂದಿದೆ ಆದರೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ಪಡೆದ ವ್ಯಕ್ತಿ ಸರ್ವಕಾಲಕ್ಕೂ ಸರ್ವ ಸ್ಥಳಕ್ಕೂ ಸಲ್ಲುವ ವ್ಯಕ್ತಿಯಾಗಿ ಗೌರವಿಸಲ್ಪಡುತ್ತಾನೆ. ಸಂಸ್ಕಾರ ಕುರಿತ ನಿದರ್ಶನವಾಗಿ ನೈಜ ಕಥೆಯೊಂದನ್ನು ವಿವರಿಸಿ ಆಶೀರ್ವದಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್ ಎನ್ ಶ್ರೀಧರ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಸುರಕ್ಷಿತ ಸಾಂಸಾರಿಕ ಜೀವನಕ್ಕಾಗಿ ಶ್ರಮಿಸುತ್ತಿರುವುದು ಸಾಮಾನ್ಯವಾಗಿದೆ.. ಕೋವಿಡ್ 19ರ ಅವಧಿಯ ಸಂದರ್ಭವನ್ನು  ಸರ್ಕಾರಿ ನೌಕರರ ಹಾಗೂ ಖಾಸಗಿಯವರ ಕಷ್ಟ ನಷ್ಟಗಳನ್ನು ನೆನೆಸಿಕೊಂಡರೆ ಜೀವನಾನುಭವದ  ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಆದರೆ ಈಗಿನ ಮಕ್ಕಳನ್ನು  ಸರಿದಾರಿಗೆ ತರುವಲ್ಲಿ ಪೋಷಕರು ಫೈನ್ ಟ್ಯೂನ್ ಮಾಡಬೇಕಿದೆ. ಮಕ್ಕಳು ತಪ್ಪು ಮಾಡಿದರೆ ಅಪ್ಪ-ಅಮ್ಮರನ್ನು, ಬೆಳೆದ ಮಕ್ಕಳನ್ನು ಶಿಕ್ಷಕರು ಮಾರ್ಗದರ್ಶಿಸಬೇಕಿದೆ. ಪ್ರೀತಿಯಿಂದ ಬಯ್ದರೆ ಮಾರ್ಗದರ್ಶನವೆಂದು ಅರಿತು ನಡೆಯುವ ಕಾಲವೊಂದಿತ್ತು, ಆದರೆ ಬದಲಾದ ಕಾಲಘಟ್ಟದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಾಗಿದೆ ಎಂದರು.

 ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಹಾಗೂ ಡೀನ್ ಡಾ ಎ ಟಿ ಶಿವರಾಮು ಮಾತನಾಡಿ ಪ್ರತಿಯೊಬ್ಬರು ದೊಡ್ಡ ಕನಸನ್ನು ಹೊಂದಿರಬೇಕು. ವೈದ್ಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಷ ಸಮವಸ್ತ್ರವನ್ನು ನೋಡಿದರೆ ನಾವು ಹೀಗೆಯೇ ಆಗಬೇಕೆಂಬ ಕನಸು ನನಸಾಗಿಸುವಲ್ಲಿ ಬೇರಿನ ಮೂಲಕ್ಕೆ ನೀರೆರೆಯಬೇಕು. Root and Fruit ನಿಯಮವನ್ನು ಪಾಲಿಸಬೇಕಿದೆ. ಪರಮ ಪೂಜ್ಯ ಸ್ವಾಮೀಜಿಯವರ ಸಂಸರ್ಗದಲ್ಲಿ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಕಲಿಯುವ ಅವಕಾಶ ನಮಗೆಲ್ಲ ದೊರೆತಿರುವುದೇ ಪುಣ್ಯ. ಇದುವರೆಗೂ ಸಾಫ್ಟವೇರ್ ಉದ್ಯಮಿಗಳಿಗೆ ಒತ್ತಡವಿತ್ತು ಈಗ ಈ ಒತ್ತಡ ಶಿಕ್ಷಕ ವೃತ್ತಿಗೆ ಶಿಫ್ಟ್ ಆಗಿದೆ, ಈ ಕಾಲದ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವುದು ನಮ್ಮೆಲ್ಲರಿಗೂ ಸವಾಲಾಗಿದೆ. ಶ್ರೀ ಮಠ ಈ ಶಾಲೆ ನಿಮ್ಮೆಲ್ಲರದು ಎಂದು ಶ್ರೇಷ್ಠ ತತ್ವಜ್ಞಾನಿ ಕನ್ಫ್ಯೂಷಿಯಸ್ ವಾಕ್ಯವನ್ನು ಉಲ್ಲೇಖಿಸಿ ಮಾತನಾಡಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಡೀನ್ ಡಾ. ಎಂ ಜಿ ಶಿವರಾಮ್ ಮಾತನಾಡಿ ಆಧುನಿಕ ಯುಗದ ಮಕ್ಕಳ ಮಾರಕ ವಿಷಯವಾಗಿ ಅಂತರ್ಜಾಲ ಸಾಮಾಜಿಕ ಮಾಧ್ಯಮಗಳು ಪ್ರಭಾವ ಬೀರುತ್ತಾ ಪಿಡುಗಾಗಿ ಪರಿಣಮಿಸುತ್ತಿವೆ. ಇದರಿಂದ ಹೊರಬರಲು ಯಾವುದೇ ಔಷಧೋಪಚಾರವಿಲ್ಲ. ಆದ್ದರಿಂದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು. 
ಮಾಡೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ವರದಿ, ವಿದ್ಯಾರ್ಥಿಗಳ ವಿವಿಧ ವಿಭಾಗದ ಸಾಧನೆಗಳನ್ನು ಹಂಚಿಕೊಳ್ಳುತ್ತ  ವಾರ್ಷಿಕೋತ್ಸವದ ವಿಶೇಷ ಆಯೋಜನೆಯನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಡೀನ್ ಡಾ. ಬಿ ರಮೇಶ್, ಪರೀಕ್ಷಾಂಗ ರಿಜಿಸ್ಟ್ರಾರ್ ಡಾ. ನಾಗರಾಜ್, ಸಂಶೋಧನಾ ವಿಭಾಗದ ಡೀನ್ ಡಾ. ಪ್ರಶಾಂತ್ ಕಾಳಪ್ಪ, ಹಣಕಾಸು ಅಧಿಕಾರಿ ಬಿ ಕೆ ಉಮೇಶ್, ಪ್ರಾಂಶುಪಾಲರಾದ ಡಾ. ಶ್ವೇತಾ ಹೆಚ್ಎನ್, ಡಾ.ಕೋಮಲ ಹೆಚ್ ಕೆ, ಪ್ರೊ. ವಿಕ್ಟೋರಿಯಾ ಸರ್ವಂದ್, ಟಿ ಎನ್ ಶಿಲ್ಪ, ಡಾ. ರವಿ ಕೆ ಎಸ್ ಹಾಗೂ ಇತರರಿದ್ದರು.