Ticker

6/recent/ticker-posts

*ವಿಶ್ವಮಾನವ ಸಂದೇಶ ಸತ್ಯ ನಿತ್ಯ ನಿರಂತರ: ಎಂ ಎನ್ ಮಂಜುನಾಥ್ ಅಭಿಮತ*

ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಪಿ ಯು ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ

ನಾಗಮಂಗಲ:ಡಿ29.ಕನ್ನಡದಲ್ಲಿ ಕಾವ್ಯಕೃಷಿ ಮಾಡಿ ಕನ್ನಡದ ವರ್ಡ್ಸ್ ವರ್ತ್ ಆಗುವೆ ಎಂಬ ಗುರುಗಳ ಮಾತಿನಿಂದ ಕನ್ನಡದ ಮೇರು ಕವಿಯಾದ, ರಸ ಋಷಿಯೇ ಕುವೆಂಪು ಎಂದು ಮೈಲಾರಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಎಂ ಎನ್ ಮಂಜುನಾಥ್ ಅಭಿಪ್ರಾಯ ಪಟ್ಟರು.

ಅವರು ಇಂದು ನಾಗಮಂಗಲ ತಾಲ್ಲೂಕಿನ ಬಿಜಿ ನಗರದ ಪಾಂಚಜನ್ಯ ಆವರಣದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್, ಪಿಯು ಕಾಲೇಜು ಹಾಗೂ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ "ವಿಶ್ವ ಮಾನವ ದಿನಾಚರಣೆ' ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
 ಶಿಕ್ಷಕರಿಗೆ ಶಿಕ್ಷಣವನ್ನು ನೀಡಿದ ಮಹಾ ಗುರು ಕುವೆಂಪು. ಪರಮ ಶ್ರೇಷ್ಠ 59 ಕೃತಿಗಳು,12 ನಾಟಕಗಳು, ಎರಡು ಕಾದಂಬರಿಗಳು,  ಜ್ಞಾನಪೀಠ ತಂದುಕೊಟ್ಟ ಮಹಾ ಕೃತಿ ಶ್ರೀ ರಾಮಾಯಣ ದರ್ಶನಂ ಬರೆದ ಕನ್ನಡ ನಾಡಿನ ಕವಿಶ್ರೇಷ್ಠ ಕುವೆಂಪು ಎಂದು ಬಣ್ಣಿಸಿದರು. ಕುವೆಂಪು ಅವರ ಸಾಹಿತ್ಯದಲ್ಲಿ ವಿಶ್ವಮಾನವ ಪ್ರಜ್ಞೆಯೊಂದಿಗೆ ಶೂದ್ರ, ದಲಿತ, ಸ್ತ್ರೀ, ಧಾರ್ಮಿಕ, ಆಧ್ಯಾತ್ಮಿಕ, ಭಾಷಾ ಹಾಗೂ ಪ್ರಾಕೃತಿಕ ಪ್ರಜ್ಞೆಗಳನ್ನು ಕಾಣುತ್ತೇವೆ ಎಂದು ಒಂದು ತಿಳಿಸುತ್ತಾ ಆಧ್ಯಾತ್ಮಿಕತೆ ವೈಚಾರಿಕತೆ ದಾರ್ಕ್ಷಣಿಕತೆಯನ್ನು ಮೆರೆವ ನನ್ನ ಗೋಪಾಲ ಕಥೆಯನ್ನು ಮಕ್ಕಳಿಗೆ ಹೇಳಿ ಮೂಕವಿಸ್ಮಿತ ಗೊಳಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜ ವಿಜ್ಞಾನಿಗಳು ವಿಭಾಗದ ಡೀನ್ ಹಾಗೂ ಪ್ರಾಂಶುಪಾಲರಾದ ಡಾ. ಎ ಟಿ ಶಿವರಾಮು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಕನ್ನಡದ ಎರಡನೇ ರಾಷ್ಟ್ರಕವಿ ಪ್ರಶಸ್ತಿ ಪಡೆದ ಕುವೆಂಪುರವರು ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಹಾಗೂ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಪ್ರಥಮ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ತಮ್ಮ ಸಾಹಿತ್ಯದ ಮೂಲಕವೇ ವೈಚಾರಿಕತೆ, ನಾಡು ನುಡಿ, ದೇಶಪ್ರೇಮ, ಭ್ರಾತೃತ್ವ ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಜೀವನ ಪ್ರೀತಿ, ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆಯನ್ನು ಎಲ್ಲರೆದೆಯಲ್ಲು ಒಡಮೂಡಿಸಿದರು. ಮನುಷ್ಯ ವಿಶ್ವಮಾನವನಾಗಲು ಅವನು ಬೆಳೆದ ಪರಿಸರವೇ ಕಾರಣ ಕುವೆಂಪುರವರ ಬೆಳವಣಿಗೆಯಲ್ಲಿ ಆಧ್ಯಾತ್ಮಿಕ ಶಕ್ತಿಯೇ ಮೈಗೂಡಿದ್ದು ವೇದ್ಯವಾಗುತ್ತದೆ. ಇವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಿರಿ ದೊಡ್ಡ ವ್ಯಕ್ತಿಗಳಾಗಿ ಎಂದು ಹರಸಿದರು.
ಕನ್ನಡ ಸಾಹಿತ್ಯ ಪರಿಷತ್ತು ನಾಗಮಂಗಲ ತಾಲ್ಲೂಕು ಅಧ್ಯಕ್ಷರಾದ ಸಿ ಆರ್ ಚಂದ್ರಶೇಖರ್ ಮಾತನಾಡಿ ಈ ವರ್ಷ ಕನ್ನಡೋತ್ಸವವನ್ನು ವಿಭಿನ್ನವಾಗಿಆಚರಿಸುವವಿಶೇಷ ಆಲೋಚನೆಯಲ್ಲಿದ್ದೇವೆ. ನಾಗಮಂಗಲ ತಾಲೂಕಿನಲ್ಲಿ 365ಕ್ಕೂ ಹೆಚ್ಚು ಹಳ್ಳಿಗಳಿದ್ದು ಪ್ರತಿ ಹಳ್ಳಿಯು ಹಬ್ಬ ಆಚರಣೆಗಳಿಂದ ವಿವಿಧತೆಯನ್ನು ಕಾಣುತ್ತೇವೆ. ಕ.ಸಾ.ಪ ಮತ್ತು ಜಾನಪದ ಪರಿಷತ್ ವತಿಯಿಂದ "ಗ್ರಾಮೀಣ ಹಬ್ಬಗಳ ಸಾಂಸ್ಕೃತಿಕ ದರ್ಶನ" ವಿಭಿನ್ನತೆಯನ್ನು ಆಧರಿಸಿದ  ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಸಾಗಿದೆ, ಪ್ರಸ್ತುತ 25 ಗ್ರಾಮಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊತ್ತಿಗೆಯಾಗಿ ಹೊರ ತರುತ್ತಿದ್ದೇವೆ. 'ನಾ ಕಂಡಂತೆ ನಮ್ಮೂರ ಹಬ್ಬ' ಶೀರ್ಷಿಕೆಯಡಿಯಲ್ಲಿ ಲೇಖನಗಳನ್ನು ಬರೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

 ಇಂತಹ ಕಾರ್ಯಕ್ರಮಗಳಿಗೆ ಶ್ರೀಮಠವೇ ನಮಗೆ ಸ್ಪೂರ್ತಿ ಎಂದು ಸ್ವಾಮೀಜಿಯವರನ್ನು ಸ್ಮರಿಸಿಕೊಂಡರು. 

ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಯಲ್ಲಿ ಹುಟ್ಟುತ್ತಾ ವಿಶ್ವಮಾನವನಾಗಿ, ಬೆಳೆಯುತ್ತಾ ಕಟ್ಟುಪಾಡುಗಳಿಂದ ಅಲ್ಪ ಮಾನವನನ್ನಾಗಿಸುತ್ತಿವೆ. ಶಿಕ್ಷಣ, ಮನುಕುಲದ ಮೌಲ್ಯಗಳನ್ನು ರೂಢಿಸುತ್ತಾ ಮತ್ತೆ ವಿಶ್ವಮಾನವನ್ನಾಗಿಸುವುದೇ ಸಾರ್ಥಕತೆಯೆಂದು ಕುವೆಂಪು ಅವರ ಆದರ್ಶಯುತ ಸಂದೇಶಗಳನ್ನು ಅಳವಡಿಸಿಕೊಳ್ಳಿ ಎಂದರು.

ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಸದಸ್ಯರಾದ ಸಿ ಎನ್ ಮಂಜೇಶ್ ಚನ್ನಾಪುರ ಮಾತನಾಡಿ ಗ್ರಾಮೀಣ ಹಬ್ಬ ಹರಿದಿನಗಳು, ಸಂಸ್ಕೃತಿ ಸಂಸ್ಕಾರಗಳ ಮಹತ್ವವನ್ನು ತಿಳಿಸಿ ಪರಿಸರ ಮತ್ತು ಗ್ರಾಮ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಟಿ ಎನ್ ಶಿಲ್ಪ ವಿದ್ಯಾರ್ಥಿಗಳನ್ನು ಕುರಿತು ಹಾಗೂ ವಿಶ್ವಮಾನವ ದಿನಾಚರಣೆಯ ಕುವೆಂಪು ಅವರ ಆದರ್ಶಗಳನ್ನು ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡ ರಸಋಷಿ ಕುವೆಂಪು ಅವರ ಕುರಿತ ಕವನ, ಗಾಯನ, ಕಿರು ನಾಟಕ, ನೃತ್ಯಗಳು ಗಮನ ಸೆಳೆದವು. 
ಕಾರ್ಯಕ್ರಮದಲ್ಲಿ ಬಿ.ಇಡಿ, ಪಿ ಯು, ಹಾಗೂ ಮಾಡೆಲ್ ಪಬ್ಲಿಕ್ ಸ್ಕೂಲ್ ಅಧ್ಯಾಪಕ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.