Ticker

6/recent/ticker-posts

ನಾಗಮಂಗಲ: ಸಣ್ಣ ಈರುಳ್ಳಿಯಲ್ಲಿ ಸಮಗ್ರ ಕೃಷಿ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಡಾ ನರೇಶ್ ಸಲಹೆ..





ನಾಗಮಂಗಲ: ರೈತರು ಪುರಾತನ ಸಾಂಪ್ರದಾಯಿಕ ಪದ್ಧತಿಗಳನ್ನು ಮಾತ್ರ ಕೃಷಿಯಲ್ಲಿ ಮುಂದುವರಿಸದೇ ಸಮಗ್ರ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ರೈತರಿಗೆ ಹಿರಿಯ ವಿಜ್ಞಾನಿ ಡಾ ನರೇಶ್ ಸಲಹೆ ನೀಡಿದರು.

ತಾಲ್ಲೂಕಿನ ಎ ಶ್ರೀರಾಮನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ವಿ ಸಿ ಫಾರಂ ಮಂಡ್ಯದ ವತಿಯಿಂದ ಆಯೋಜಿಸಲಾಗಿದ್ದ ಸಣ್ಣ ಈರುಳ್ಳಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮೂಂಚೂಣಿ ಪ್ರಾತ್ಯಕ್ಷಿಕೆ ಮತ್ತು ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ರೈತರು ಇಂದು ವ್ಯವಸಾಯದಲ್ಲಿ ನಷ್ಟ ಅನುಭವಿಸಲು ಪ್ರಮುಖವಾದ ಕಾರಣವೆಂದರೆ ಅಜ್ಞಾನವಾಗಿದೆ.ರೈತರು ವ್ಯವಸಾಯಕ್ಕೆ ಸಂಬಂಧಿಸಿದ ಅಗತ್ಯ ತರಬೇತಿ ಮತ್ತು ಮಾಹಿತಿ ಇಲ್ಲದೇ ವ್ಯವಸಾಯದಲ್ಲಿ ತೊಡಗುವುದರಿಂದ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ ಎಂದರು.

ರೈತರು ಯಾವುದೇ ಬೆಳೆ ಬೆಳೆಯುವಾಗ ಆ ಬೆಳೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕ.ರೈತರು ನೇರವಾಗಿ ಕೃಷಿ ಅಧಿಕಾರಿಗಳು ಮತ್ತು ತಜ್ಞರಿಂದ ಮಾಹಿತಿ ಕೇಳಿ ತಿಳಿದುಕೊಳ್ಳಬೇಕು.ಅಲ್ಲದೇ ಬೆಳೆಯನ್ನು ಬೆಳೆಯುವ ಮೊದಲು ವೈಜ್ಞಾನಿಕ ಕ್ರಮಗಳಾದ ಮಣ್ಣಿನ ಪರೀಕ್ಷಣೆ ಮತ್ತು ಹವಾಮಾನ ಹೊಂದಾಣಿಕೆಯ ಅಂಶಗಳನ್ನು ಗಮನಿಸಿ ಬೆಳೆಯ ಆಯ್ಕೆ ಮಾಡಬೇಕು ಎಂದರು.

ಸಣ್ಣ ಈರುಳ್ಳಿ ಬೇಸಾಯ ಮಾಡುವ ರೈತರು ಇನ್ನೂ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುತ್ತಿರುವುದು ಕಂಡು ಬರುತ್ತಿದೆ.ಸಣ್ಣ ಈರುಳ್ಳಿ ಬೆಳೆಗೆ ಅಗತ್ಯವಾದ ಅಂಶಗಳನ್ನು ಗಮನಿಸಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡರೆ ಅಧಿಕ ಇಳುವರಿ ಪಡೆಯುವ ಜೊತೆಗೆ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಬಹುದು. ಆದ್ದರಿಂದ ರೈತರು ಸಮಗ್ರ ಕೃಷಿ ವಿಧಾನಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಜ್ಞಾನಿ ಪವಿತ್ರ ರೈತರಿಗೆ ಈರುಳ್ಳಿ ಬೆಳೆಯಲ್ಲಿ ಕಂಡುಬರುವ ಸಮಸ್ಯೆಗಳು ಮತ್ತು ರೋಗಗಳು,ಕೀಟಭಾದೆಗಳನ್ನು ಪರಿಹರಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿ ರೈತರು ಅವುಗಳನ್ನು ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಸಣ್ಣ ಈರುಳ್ಳಿ ಬೆಳೆಯಲ್ಲಿ ಬಳಸಬೇಕಾದ ಕ್ರಿಮಿನಾಶಕ ಮತ್ತು ಗೊಬ್ಬರಗಳ ಪ್ರಮಾಣ ಎಷ್ಟಿರಬೇಕು ಎಂಬುದನ್ನು ತಿಳಿಸಿದರು. ಅಲ್ಲದೇ ರೈತರ ವ್ಯವಸಾಯದ ವಿಧಾನದಲ್ಲಿ ಇರುವ ಗೊಂದಲಗಳನ್ನು ಕುರಿತು ಚರ್ಚೆ ನಡೆಸಿದರು.

ತರಬೇತಿ ಸಹಾಯಕ ಡಾ ಮಹೇಶ್,ವಿಜ್ಞಾನಿ ಜೈಶಂಕರ್,ಗ್ರಾಮಸ್ಥರಾದ ರಾಮಚಂದ್ರ, ನಾಗರಾಜು ಮತ್ತು ರೈತರು ಇದ್ದರು.


 -----ಡಿ . ಆರ್ . ಜಗದೀಶ್  (ದೇವಲಾಪುರ )