ನಾಗಮಂಗಲ:ಜೂ:-5. ಭಗವಂತನು ದೃಷ್ಟಿಸಿದ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ, ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಸುರಕ್ಷಿತ ಹಾಗೂ ಸುಂದರಗೊಳಿಸೋಣ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜ ವಿಜ್ಞಾನಗಳು ವಿಭಾಗದ ಡೀನ್ ಡಾ. ಎ ಟಿ ಶಿವರಾಮು ಅಭಿಪ್ರಾಯ ಪಟ್ಟರು.
ಅವರು ನಾಗಮಂಗಲ ತಾಲೂಕಿನ ಬಿಜಿ ನಗರದ ಬಿಜಿಎಸ್ ಪಾಂಚಜನ್ಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜಿಎಸ್ ಮಾಡಲ್ ಪಬ್ಲಿಕ್ ಸ್ಕೂಲ್, ಪಿಯು ಕಾಲೇಜು, ಶಿಕ್ಷಣ ಮಹಾವಿದ್ಯಾಲಯದಿಂದ ನಡೆದ ಗಿಡ ನೆಡುವ ಮತ್ತು ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮರ ಕಡಿದು ನರಕ ನಿರ್ಮಿಸದೆ ಗಿಡ ನೆಟ್ಟು ಮರವಾಗಿ ಬೆಳೆಸಿ ಪರಿಸರವನ್ನು ಸ್ವರ್ಗವಾಗಿಸುವುದೇ ನಮ್ಮೆಲ್ಲರ ಕರ್ತವ್ಯವಾಗಬೇಕು. ಪಾಂಚಜನ್ಯ ಆವರಣದಲ್ಲಿ 45 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ಶಿಕ್ಷಕರು ಈ ಗಿಡಗಳನ್ನು ಪೋಷಿಸುವ ಕೆಲಸವೂ ಸಾರ್ಥಕವಾಗಲಿ ಎಂದರು.
ಪ್ರಾಚಾರ್ಯರು ಮತ್ತು ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡುತ್ತಾ ಕೈಗೊಂಡ ಜಾಗೃತಿ ಜಾಥಾ ಮೂಲಕ ಬ್ಯಾಂಕ್, ಅಂಚೆ ಕಚೇರಿ, ಹೋಟೆಲ್ಗಳು, ಕಾರ್ ಶೋರೂಮ್, ಇಎಸ್ಐ ಕಚೇರಿ, ಅಂಗಡಿಗಳು ಸೇರಿದಂತೆ ಬಿಜಿ ನಗರ ಭಾಗದ ವಿವಿಧ ಸಂಸ್ಥೆಗಳಿಗೆ ತೆರೆದ ವಾಹನದಲ್ಲಿ ಕೊಂಡೊಯ್ದ ಗಿಡಗಳನ್ನು ನೀಡಿ, ನೆಟ್ಟು ಪೋಷಿಸುವಂತೆ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರ ಪ್ರತಿಕ್ರಿಯೆ ಆಶಾದಾಯಕವಾಗಿತ್ತು.
ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ ಎನ್ ಶಿಲ್ಪ, ಮಾಡಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ವಿ ಪುಟ್ಟಸ್ವಾಮಿ, ಬಿಎಡ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ ಹೆಚ್ ಗೋಪಾಲ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಸಿ ಎಲ್ ಶಿವಣ್ಣ ಮತ್ತು ಮೂರೂ ಸಂಸ್ಥೆಗಳ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳಿದ್ದರು.
