ಸಂತೇಮರಹಳ್ಳಿ: ಜಿಲ್ಲಾ ಬಸವ ಕೇಂದ್ರ ಜಿಲ್ಲಾ ಪ್ರಧಾನ ಕಚೇರಿ ಸಂತೆಮರಹಳ್ಳಿಯಲ್ಲಿ ಇಂದು ಬಸವ ಜಯಂತೋತ್ಸವವನ್ನು ಅತ್ಯಂತ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.
ಬಸವಣ್ಣನವರ ತತ್ವಗಳು, ಸಮಾನತೆ, ಶರಣರ ದರ್ಶನ ಮತ್ತು ಸಮಾಜ ಪರಿವರ್ತನೆಯ ಸಂದೇಶಗಳನ್ನು ಸಾರುವ ಈ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಲ್ಲಾರು ಬಸವೇಶ್ವರರ ವಚನಗಳನ್ನು ಪಠಿಸಿ, ಅವರ ಜೀವನ ಸಂದೇಶಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಹೊನ್ನೂರು ಪರಮೇಶ್ ಅವರು ಸ್ವಾಗತ ಭಾಷಣ ಮಾಡಿ, ಬಸವ ಜಯಂತಿಯ ಮಹತ್ವವನ್ನು ವಿವರಿಸಿದರು. ಬಸವಣ್ಣರವರ ಸಮಾನತೆಯ ಸಂದೇಶವು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.
ಬಸವ ಕೇಂದ್ರ ಜಿಲ್ಲಾಧ್ಯಕ್ಷರಾದ
ಎನ್ ರಿಚ್ ಮಹದೇವಸ್ವಾಮಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ಚಿಂತನೆಗಳು ಕೇವಲ ಧಾರ್ಮಿಕವಲ್ಲ, ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗೂ ಕಾರಣವಾಗಿವೆ ಎಂದು ತಿಳಿಸಿದರು. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ತತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಪ್ರವಚನಕಾರರಾದ ಮಾಸ್ಟರ್ ಮಹದೇವಸ್ವಾಮಿ ಅವರು ಬಸವೇಶ್ವರರ ಜೀವನ, ಅವರ ತತ್ವಶಾಸ್ತ್ರ ಹಾಗೂ ಶರಣರ ಚಳುವಳಿಯ ಮಹತ್ವವನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿದರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪವು ಜಗತ್ತಿನ ಮೊದಲ ಪ್ರಜಾಪ್ರಭುತ್ವ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಬಸವ ಕೇಂದ್ರ ಖಜಾಂಚಿ ಮಲ್ಲಿಗೆಹಳ್ಳಿ ಗಣೇಶ್, ಯಳಂದೂರು ತಾಲ್ಲೂಕು ಅಧ್ಯಕ್ಷರು ಹೊನ್ನೂರು ಮಂಜು, ಹೆಗ್ಗವಾಡಿ ಮಹದೇವಪ್ರಭು, ಬಸವಟ್ಟಿ ಆರ್.ಎಸ್. ಪ್ರಸಾದ್, ಎಚ್.ವೈ. ಜಿತೇಂದ್ರ ಹೆಗ್ಗವಾಡಿಪುರ ನಂದೀಶ್ ಸಂತೇಮರಹಳ್ಳಿ ಕಲಾವಿದ ಪ್ರಭು, ಉಪಸ್ಥಿತರಿದ್ದರು. ಜೊತೆಗೆ ಅಖಿಲ ಭಾರತ ವೀರಶೈವ ಮಹಾಸಭೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ ಎಂ ಶ್ರೀಕಂಠಮೂರ್ತಿ ಸೇರಿದಂತೆ ಅನೇಕ ಗಣ್ಯರು ಹಾಗೂ ಬಸವ ಅಭಿಮಾನಿಗಳು ಭಾಗವಹಿಸಿದರು.
ಕಾರ್ಯಕ್ರಮವು ಬಸವಣ್ಣನವರ ವಚನಗಳ ಪಠಣ, ಚಿಂತನೆಗಳ ಹಂಚಿಕೆ ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಸಂಕಲ್ಪದೊಂದಿಗೆ ಯಶಸ್ವಿಯಾಗಿ ನಡೆಯಿತು.
ಈ ಬಸವ ಜಯಂತಿ ಉತ್ಸವವು ಬಸವ ತತ್ವಗಳ ಪ್ರಸಾರಕ್ಕೆ ಮತ್ತಷ್ಟು ಬಲ ನೀಡುವಂತೆ ಹಾಗೂ ಯುವ ಪೀಳಿಗೆಗೆ ಪ್ರೇರಣೆಯಾಗುವಂತೆ ನೆರವಾಯಿತು.
ವರದಿ ಹೊನ್ನೂರು ಪರಮೇಶ್
