ಗುರುಪುರ : ಬದಲಾದ ಸಮಯಕ್ಕೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆಯಾಗಿದೆ. ವೈಜ್ಞಾನಿಕ ರೀತಿಯ ಕೃಷಿ ಹೆಚ್ಚು ಲಾಭದಾಯಕ. ಸರ್ಕಾರದಿಂದ ಕೃಷಿಕರಿಗೆ ಸಹಾಯ ದೊರೆಯುತ್ತಿದ್ದು, ಅವುಗಳ ಲಾಭ ಪಡೆಯಬೇಕು. ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗಿದೆ. ಇದಕ್ಕೆ ರಿಯಲ್ ಎಸ್ಟೇಟ್, ಗದ್ದೆಗಳ ಒಳ ಸಮಸ್ಯೆಗಳು ಮತ್ತು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಇಲ್ಲದಿರುವಿಕೆ ಪ್ರಮುಖ ಕಾರಣವಾಗಿವೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಕೃಷಿ ಇಲಾಖೆ ಮಂಗಳೂರು ಮತ್ತು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇವರ ಜಂಟಿ ಆಶ್ರಯದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ಎಟಿಎಂಎ / ಆತ್ಮ ಯೋಜನೆಯಡಿ ಅ. 4ರಂದು ವಾಮಂಜೂರಿನಲ್ಲಿರುವ ಸಂಘದ ಸಭಾಂಗಣದಲ್ಲಿ `ಕಿಸಾನ್ ಗೋಷ್ಠಿ' ಉದ್ಘಾಟಿಸಿ ಮಾತನಾಡಿ, ಈಗ ಅಧಿಕ ಲಾಭ ಕೊಡುವ ಬೆಳೆಗಳತ್ತ ಕೃಷಿಕ ಮನಸ್ಸು ಮಾಡಿದ್ದಾನೆ. ಇದಕ್ಕಾಗಿ ಕೃಷಿಕರು ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಕಿಸಾನ್ ಗೋಷ್ಠಿ ಹೆಚ್ಚು ಪ್ರಯೋಜನಕಾರಿ ಎಂದರು.
ಗುರುಪುರ ವ್ಯ.ಸೇ.ಸ. ಸಂಘ(ನಿ) ಇದರ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ, ಮoಗಳೂರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ. ಪ್ರವೀಣ್
ಮಂಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ. ಆರ್, ಕೃಷಿ ಇಲಾಖೆ ಉಪ-ನಿರ್ದೇಶಕಿ ಕುಮುದಾ ಎಸ್, ಸಂಘದ ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ಸಂಘದ ನಿರ್ದೇಶಕ ಮಂಡಳಿಯ ಎಲ್ಲ ನಿರ್ದೇಶಕರು, ಮಂಗಳೂರು ಪಶು ಸಂಗೋಪನಾ ಅಧಿಕಾರಿ ಡಾ. ವೆಂಕಟೇಶ್ ಮಳವಳ್ಳಿ, ಕೃಷಿ ವಿಜ್ಞಾನಿ ಡಾ. ಹರೀಶ್ ಶೆಣೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ತಾಲೂಕಿನ ಗುರುಪುರ ಮತ್ತು ಸುರತ್ಕಲ್ ಹೋಬಳಿಯಲ್ಲಿ ಭತ್ತದ ಬೆಳೆಯಲ್ಲಿ ಅಧಿಕ ಇಳುವರಿ ಪಡೆದಿರುವ ರೈತರಿಗೆ ಸನ್ಮಾನ, ಆತ್ಮ ಕೃಷಿ ಯೋಜನೆಯ ಕೃಷಿಕರಿಗೆ ಸನ್ಮಾನ, ಕೃಷಿಕರಿಗೆ ಸವಲತ್ತುಗಳು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.