ನಾಗಮಂಗಲ ಆ.23 ಜ್ಞಾನಕ್ಕೆ ಜಗತ್ತನ್ನು ಗೆಲ್ಲುವ ಸಾಮರ್ಥ್ಯವಿದೆ, ಅಕ್ಷರ ದೀಕ್ಷೆಯಿಂದ ಬೆಳಕಿನ ಅನಾವರಣವಾಗಬೇಕಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ "ಜ್ಞಾನಾಂಕುರ" ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಅಕ್ಷರಾಭ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ಮಕ್ಕಳ ಮನಸ್ಸಿಗೆ ಬಿತ್ತಿದ ಅಕ್ಷರ-ಜ್ಞಾನ ಉತ್ತಮ ಫಲ ಕೊಡಲು ಇಂದು ನಿಮ್ಮ ಮಡಿಲಲ್ಲಿರುವ ಮಗುವಿಗೆ ಪೂರಕ ಶಕ್ತಿ ಮತ್ತು ಸಂಸ್ಕಾರ ತುಂಬಿ ಬೆಳೆಸಿದರೆ ಅದು ಜ್ಞಾನಾಂಕುರವಾಗಿ, ಸಮಾಜದ ಬೆಳಕಾಗಿ ಹೊರಹೊಮ್ಮುತ್ತದೆ. ಧಾರ್ಮಿಕ-ಆದ್ಯಾತ್ಮಿಕ ಮೌಲ್ಯಗಳೊಂದಿಗೆ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳಲ್ಲಿ ಸಂಸ್ಕಾರಗಳನ್ನು ಬಿತ್ತುವ ಕಾರ್ಯ ಶುಭಾರಂಭವಾಗಿದೆ.
ಸರ್ವಸ್ವವನ್ನೂ ತ್ಯಾಗ ಮಾಡಿ ಏನು ಗಳಿಸಿದಿರಿ? ಎಂಬ ಪ್ರಶ್ನೆಗೆ ಜ್ಞಾನೋದಯವಾದ ಬುದ್ಧನು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎಂಬ ಉದಾತ್ತ ಚಿಂತನೆಯ ಸಾರವನ್ನು ತಿಳಿಸುತ್ತಾನೆ. ಹಾಗೆಯೇ ಒಂದು ಸಾವಿರ ಕೆಜಿ ಅದಿರನ್ನು ಅನುಕ್ರಮವಾಗಿ ಶೋಧಿಸಿದರೆ ಮೂರು ಗ್ರಾಂ ಚಿನ್ನ ಪಡೆಯಲು ಸಾಧ್ಯ. ಇಂದು ಈ ಸಣ್ಣ ಬೀಜದಲ್ಲಿ ದೊಡ್ಡ ಮರವಿರುವುದು ಕಾಣುತ್ತಿಲ್ಲ, ಆದರೆ ಬಿತ್ತಿ ಪೋಷಿಸಿದರೆ ದೊಡ್ಡ ಮಾರಲಾಗುತ್ತದೆ. ಜನ್ಮವಿತ್ತು ಆಶ್ರಯ ಕೊಟ್ಟಿರುವ ರೇಷ್ಮೆಯಂತಹ ಮೃದು ಮಧುರ ಮನಸ್ಸಿನ ಮಕ್ಕಳ ಪೋಷಣೆಯ ಜವಾಬ್ದಾರಿ ನಿಮ್ಮ ಮೇಲಿದೆ, ಸಹಜ ಸಂಸಾರಿಕ ತೊಡಕುಗಳು ಹಾಗೂ ಸಮಾಜದ ಭವಿಷ್ಯವನ್ನು ಅರಿತು ಮುನ್ನಡೆಯಲು ಮಾರ್ಗದರ್ಶಕ ನುಡಿಗಳನ್ನಾಡಿದರು. ಜ್ಞಾನದಾತೆ ಶ್ರೀ ಸರಸ್ವತಿ ಹೋಮದ ಮಹಾ ಪೂರ್ಣಾಹುತಿಯನ್ನು ನೆರವೇರಿಸಿ ವೇದ ದೋಷ, ಓಂಕಾರೋಪಾಸನೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಜ್ಞಾನ ದೀಕ್ಷೆಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್ ಎನ್ ಶ್ರೀಧರ ಮಾತನಾಡಿ ಧಾರ್ಮಿಕ ಆಚರಣೆಯಾಗಿ ಹಾಗೂ ಸಂಸ್ಕೃತಿಯ ಸಂಕೇತವಾಗಿ ಇಂತಹ ಅಕ್ಷರಾಭ್ಯಾಸ ಕಾರ್ಯಕ್ರಮಗಳು ಇತರ ಸಂಸ್ಥೆಗಳಲ್ಲಿ ವಿರಳ. ನಾನು ಹಿಂದೆ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯ ನೌಕರರು ಈ ಸಂಸ್ಥೆಯ ಉತ್ತಮ ಅಂಶಗಳನ್ನು ತಿಳಿಸಿ ಎಂದು ಕರೆ ಮಾಡಿದಾಗ ನಿಯೋಗದೊಡನೆ ಆಗಮಿಸಿ ಇಲ್ಲಿನ ಮಕ್ಕಳಿಗಿರುವ ಸಂಸ್ಕೃತಿಯ ಅರಿವು, ಶಿಸ್ತುಬದ್ಧ ಕಲಿಕೆ ಇತ್ಯಾದಿಗಳನ್ನು ಸ್ವತಃ ವೀಕ್ಷಿಸಲು ತಿಳಿಸಿದ್ದನ್ನು ಉಲ್ಲೇಖಿಸಿದರು. ರೈಲು ಪ್ರಯಾಣದಲ್ಲಿ ಕಂಡ ಪುಟ್ಟ ಮಗುವಿನ ಪುಸ್ತಕದ ಓದುವ ಅಭ್ಯಾಸದ ಬಗ್ಗೆ ಶ್ಲಾಘಿಸಿ, ಮಕ್ಕಳಿಗೆ ಮೊಬೈಲ್ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದರು.
ಪ್ರಾಸ್ತಾವಿಕ ನುಡಿಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು ಮಾತನಾಡಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಆಶೀರ್ವಾದದಿಂದ ನಮ್ಮ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಶಾಲೆಗಳಲ್ಲಿ ಪ್ರತಿವರ್ಷ ಜ್ಞಾನಾಂಕುರ ಕಾರ್ಯಕ್ರಮವನ್ನು ಆಯೋಜಿಸಿ, ಪರಮ ಪೂಜ್ಯರು ಅಕ್ಷರ ದೀಕ್ಷೆಯನ್ನು ನೀಡುತ್ತಿದ್ದಾರೆ. ಇದು ಸಂಸ್ಕೃತಿ-ಸಂಸ್ಕಾರಗಳ ಕಲಿಕೆಗೆ ಧಾರ್ಮಿಕ ಬುನಾದಿಯಾಗಿದೆ, ಮರಕ್ಕೆ ತಾಯಿಬೇರು ಹೇಗೋ ಹಾಗೆಯೇ ಈ ಸಂಸ್ಕಾರ. ಶಾಲೆಯಲ್ಲಿ ಇದರೊಂದಿಗೆ ಸಂಗೀತ, ನೃತ್ಯ, ವಿವಿಧ ಕಲೆಗಳು ಇತ್ಯಾದಿ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವುದು ನಮ್ಮ ಸಂಸ್ಥೆಯ ವಿಶೇಷವಾಗಿದೆ. ಮಗುವಿನ ಬುದ್ಧಿಶಕ್ತಿ ಮತ್ತು ಮಾನಸಿಕ ಸಾಮರ್ಥ್ಯವನ್ನು ಅರಿತು ಕಲಿಸುವ ಜ್ಞಾನವೇ ಸಮಾಜದ ಬೇರು ಎಂದು ಭಾವಿಸಿ ಮೂಲ ಶಿಕ್ಷಣಕ್ಕೆ ನೀರೆರೆದು ಪೋಷಿಸಿದರೆ ಉತ್ತಮ ಫಲ ನೀಡುತ್ತದೆ ಎಂಬುದು ಸಂಸ್ಕಾರಯುತ ಅಕ್ಷರಾಭ್ಯಾಸದ ಮೂಲ ತತ್ವವಾಗಿದೆ ಎಂದರು.
ಕಲಾ ಅಧ್ಯಾಪಕ ಬೊಮ್ಮರಾಯಸ್ವಾಮಿ ವಿನ್ಯಾಸಗೊಳಿಸಿದ ವಿಶೇಷ ವೇದಿಕೆಯಲ್ಲಿ ಸುಮಾರು 108 ಮಕ್ಕಳಿಗೆ ಪೋಷಕರ ಸಮ್ಮುಖದಲ್ಲಿ ಅಕ್ಷರಾಭ್ಯಾಸ ನೆರವೇರಿತು. ವಿಶಿಷ್ಟ ನೃತ್ಯ, ಭಜನೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ವಿ ಪುಟ್ಟಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ ಎನ್ ಶಿಲ್ಪ, ಮೈಲಾರ ಪಟ್ಟಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ ಎನ್ ಮಂಜುನಾಥ್, ಬೆಳ್ಳೂರು ಆರಕ್ಷಕ ಉಪನಿರೀಕ್ಷಕ ರವಿಕುಮಾರ್, ಬಿ.ಇಡಿ ಮತ್ತು ಪಿಯು ಕಾಲೇಜಿನ ಅಧ್ಯಾಪಕರು, ಶಾಲಾ ಸಂಯೋಜಕರು ಹಾಗೂ ಇತರರಿದ್ದರು