Ticker

6/recent/ticker-posts

ಮದ್ದೇನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಹುಚ್ಚೇಗೌಡ


ನಾಗಮಂಗಲ,ಏ.4 :ತಾಲೂಕಿನ ದೇವಲಾಪುರ ಹೋಬಳಿಯ ಮದ್ದೇನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಹುಚ್ಚೇಗೌಡ ಮತ್ತು ಉಪಾಧ್ಯಕ್ಷರಾಗಿ ಬಿಳಿಯಪ್ಪ ಅವಿರೋಧವಾಗಿ ಆಯ್ಕೆಯಾದರು.

ಇಂದು ತಾಲೂಕಿನ ದೇವಲಾಪುರ ಹೋಬಳಿ ಮದ್ದನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12ಮಂದಿ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9ಮಂದಿ ಮತ್ತು ಜೆಡಿಎಸ್ ಬೆಂಬಲಿತ ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಹುಚ್ಚೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಬಿಳಿಯಪ್ಪ ಹೊರತುಪಡಿಸಿ ಬೇರ‍್ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವೆಂದು ಚುನಾವಣಾಧಿಕಾರಿ ಜೆ.ಸಂತೋಷ್‌ಕುಮಾರ್ ಪ್ರಕಟಿಸಿದರು.

ಅವಿರೋಧ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘದ ಮುಂಭಾಗದಲ್ಲಿ ಬೃಹತ್ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತಮಟೆ ಮಂಗಳವಾದ್ಯದೊoದಿಗೆ ಮರೆವಣಿಗೆ ಮೂಲಕ ಗ್ರಾಮದ ಶಕ್ತಿದೇವತೆ ಶ್ರೀ ಮದ್ದೇನಟ್ಟಮ್ಮ ದೇವಿ ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ನೂರಾರು ಮಂದಿ ಕಾರ್ಯಕರ್ತರು ಮತ್ತು ಸ್ಥಳೀಯ ಜನರಿಗೆ ಲಘು ಉಪಹಾರ ವಿತರಿಸಲಾಯಿತು.

ನೂತನ ಅಧ್ಯಕ್ಷ ಎಂ.ಹುಚ್ಚೇಗೌಡ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಂಘದ ಎಲ್ಲಾ ನಿರ್ದೇಶಕರ ಬೆಂಬಲ, ಸಹಕಾರದಿಂದ ಈ ಸಂಸ್ಥೆಗೆ ಅಧ್ಯಕ್ಷನಾಗಿದ್ದೇನೆ. ಸಂಘದ ವ್ಯಾಪ್ತಿಯ 14ಹಳ್ಳಿಗಳ ರೈತರ ಅನುಕೂಲಕ್ಕಾಗಿ ಸಹಕಾರ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸುವುದು ಮತ್ತು ಚೋಳೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರ್ಕಾರದ 5ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಅನುಕೂಲವಾಗುತ್ತಿದೆ. ಇದರ ಜೊತೆಗೆ ಸಂಘದಲ್ಲಿ ಸದಸ್ಯತ್ವ ಹೊಂದಿರುವ ರೈತರು, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದ ಸಿಗುವ 5ಲಕ್ಷ ರು.ವರೆಗೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ಕೊಡಿಸುವುದಲ್ಲದೆ ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಹೇಳಿದರು.

ಮುಖಂಡ ಪ್ರಭಾಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ನೂತನ ಅಧ್ಯಕ್ಷ ಎಂ.ಹುಚ್ಚೇಗೌಡರು ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಸಂಘದ ಅಭಿವೃದ್ಧಿಯ ಜೊತೆಗೆ ಈ ಭಾಗದ ಹಳ್ಳಿಗಳ ಅಭಿವದ್ಧಿಗೂ ಶ್ರಮಿಸಬೇಕು ಎಂದರು.


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಹಕಾರ ಕಂಪನಿಯ ನಿರ್ದೇಶಕರಾದ ರಾಜೇಶ್. ಸಮಾಜ ಸೇವಕ ಮಾವಿನಕೆರೆ ಸುರೇಶ್, ನಂದಿ ರಮೇಶ್ ಉದಯಕಿರಣ್, ಪ್ರಭಾಕರ್, ತಾಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಮಾಜಿ ಸದಸ್ಯ ಬಿ.ಎಂ.ವೇಣುಗೋಪಾಲ್, ಮುಖಂಡರಾದ ಎಂ.ಎನ್.ಮಾಯಣ್ಣ, ಅಪ್ಪಾಜಿ, ಬಿ.ಜೆ.ನಾರಾಜು, ರಮೇಶ್, ನಾಗರಾಜು, ಸಣ್ಣತಿಮ್ಮಯ್ಯ, ಅನಿಲ್‌ಕುಮಾರ್, ರಾಜಣ್ಣ, ಮಹೇಶ್, ಗಂಗರಾಜು, ಯೋಗೇಶ್, ರವಿ, ಲೋಕೇಶ್, ನಂಜಯ್ಯ, ಮಂಜು, ತಿಮ್ಮೇಶ್, ಶಿವಣ್ಣ, ರಾಜಣ್ಣ, ರಾಮು, ಸಂಘದ ನಿರ್ದೇಶಕರಾದ ಮರಿಸ್ವಾಮಿ, ಜೆ.ನಾಗರಾಜು, ಚನ್ನಮ್ಮ, ಸಾಕಮ್ಮ, ಕೆ.ಜೆ.ಮುದ್ದುರಾಜು, ಉಮೇಶ, ಜೆ.ರಾಜು, ಎಂ.ಎನ್.ನಂಜುಂಡಪ್ಪ, ಎಂ.ಎನ್.ಕೃಷ್ಣೇಗೌಡ, ಬಿ.ಕೆ.ರಾಮಸ್ವಾಮಿ, ಸಂಘದ ಸಿಇಓ ಪ್ರಕಾಶ್ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
--