ನಾಗಮಂಗಲ: ಏ 7. 'ನನ್ನ ಆರೋಗ್ಯ ನನ್ನ ಹಕ್ಕು' ಎಂಬ ಘೋಷವಾಕ್ಯ ದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತಿದ್ದೇವೆ. "ಆರೋಗ್ಯಕರ ಆರಂಭ ಭರವಸೆಯ ಭವಿಷ್ಯ" ಎಂಬುದು ಪ್ರಸ್ತುತ ವರ್ಷದ ಥೀಮ್ ಆಗಿದ್ದು, ಸರ್ವರೂ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಬೆಳ್ಳೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಲಕ್ಷ್ಮಮ್ಮಮಹೇಶ್ ಅಭಿಪ್ರಾಯ ಪಟ್ಟರು.
ಅವರು ಇಂದು ಏಪ್ರಿಲ್ 07 ವಿಶ್ವ ಆರೋಗ್ಯ ದಿನದ ಅಂಗವಾಗಿ ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ10, ವಿಜ್ಞಾನ ಸಂಘ, ಮತ್ತು ಬೆಳ್ಳೂರು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಬಿ ಇಡಿ ಪ್ರಶಿಕ್ಷಣಾರ್ಥಿಗಳು ಕೈಗೊಂಡ 'ಆರೋಗ್ಯಕ್ಕಾಗಿ ಕಾಲ್ನಡಿಗೆ ಜಾಗೃತಿ ಜಾಥಾ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯು 1950 ರಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಆರಂಭಿಸಿತು. ಪ್ರತಿ ವರ್ಷ ಈ ದಿನವನ್ನು ವಿಶೇಷವಾಗಿ ಆಚರಿಸಿ ಜನಸಾಮಾನ್ಯರಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. ಈ ಮೂಲಕ ಸಮಾಜದ ಆರೋಗ್ಯವು ಉತ್ತಮಗೊಳ್ಳುತ್ತದೆ. ಪರಿಸರ ನೈರ್ಮಲ್ಯದ ಪ್ರಾಮುಖ್ಯತೆಯೊಡನೆ 'ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ'ವನ್ನು ಸಾಧಿಸಲು ಶುದ್ಧ ಹಾಗೂ ಪೌಷ್ಟಿಕ ಆಹಾರವನ್ನು ಸೇವನೆಯೇ ಮೊದಲ್ಗೊಂಡು ಸಾವಯವ ಆಹಾರಕ್ಕೆ ಆದ್ಯತೆ ನೀಡಿ, ಸ್ವಚ್ಛ ಪರಿಸರದಲ್ಲಿ ಸ್ವಸ್ಥ ಆರೋಗ್ಯಕರ ಜೀವನ ನಿರ್ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಭವಿಷ್ಯದಲ್ಲಿ ಶಿಕ್ಷಕರಾಗುತ್ತಿರುವ ನೀವು ವೃತ್ತಿ ಬದುಕಿನುದ್ದಕ್ಕೂ ನಿಮ್ಮ ವಿದ್ಯಾರ್ಥಿಗಳಿಗೆ ಸ್ವಸ್ಥ ಆರೋಗ್ಯ ಪರಿಕಲ್ಪನೆಯನ್ನು ಮೂಡಿಸಿ ಸದೃಢ ಹಾಗೂ ಆರೋಗ್ಯಕರ ದೇಶವನ್ನು ನಿರ್ಮಿಸಲು ಮುಂದಾಗಿ ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಘಟಕದ ಮುಖ್ಯ ಸಂಯೋಜನಾಧಿಕಾರಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ ಟಿ ಶಿವರಾಮು ಇವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮವು ಬಿಜಿ ನಗರದಿಂದ ಬೆಳ್ಳೂರಿನ ವರಿಗೂ ಕಾಲ್ನಡಿಗೆಯಲ್ಲಿ ಸಾಗಿ ಬೆಳ್ಳೂರು ಸಂತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಟ್ಟಣದ ಮುಖ್ಯ ಸ್ಥಳಗಳಲ್ಲಿ ಮಾನವ ಸರಪಳಿ ರಚಿಸಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸಿದರು.
ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಲ್ಯಾಬ್ ಮಂಜೇಗೌಡ ಮಾತನಾಡಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಂಗ ಸಂಸ್ಥೆಯಾದ ಶಿಕ್ಷಣ ಮಹಾವಿದ್ಯಾಲಯ ಕೈಗೊಳ್ಳುತ್ತಿರುವ ಈ ಆರೋಗ್ಯ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಿಗೆ ಹಾಗೂ ಇಲ್ಲಿ ಸೇರಿರುವ ಗ್ರಾಮೀಣ ಭಾಗದ ಜನತೆಗೆ ಬಹಳ ಉಪಯುಕ್ತವಾಗಿದೆ ಎನ್ನುತ್ತಾ ಪೌಷ್ಟಿಕಾಂಶಗಳ ಉಪಯೋಗ, ಉತ್ತಮ ಜೀವನಶೈಲಿ, ಉತ್ತಮ ಆಹಾರ ಪದ್ಧತಿ, ಸಕಾರಾತ್ಮಕ ಅಭ್ಯಾಸಗಳು ಆರೋಗ್ಯವನ್ನು ವೃದ್ಧಿಸುತ್ತವೆ. ಬೇಸಿಗೆ ಕಾಲವಾದ್ದರಿಂದ ಸಾಕಷ್ಟು ನೀರು ಕುಡಿಯಿರಿ ಆರೋಗ್ಯವನ್ನು ಸದೃಢಗೊಳಿಸಿ ಎಂದರು.
ಉಪಾಧ್ಯಕ್ಷರಾದ ಮೊಹಮ್ಮದ್ ಯಾಸಿನ್ ಮಾತನಾಡಿ ಸಕಲ ಐಶ್ವರ್ಯಕ್ಕಿಂತ ಆರೋಗ್ಯ ಭಾಗ್ಯವೇ ಬಹುದೊಡ್ಡ ಆಸ್ತಿ, ಈ ಆಸ್ತಿಯನ್ನು ಆಸ್ತೆಯಿಂದ ಕಾಪಾಡಿಕೊಂಡರೆ ಆರೋಗ್ಯವಂತ ಸಮಾಜವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಜಾಗೃತಿ ಮೂಡಿಸುವ ಈ ಅಭಯಾನ ಶ್ಲಾಘನೀಯ ವಿದ್ಯಾರ್ಥಿಗಳಿಗೆ ಹಾಗೂ ಆಯೋಜಿಸಿದ ಈ ಸಂಸ್ಥೆಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಎಂದರು.
ಜಾಥಾ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಇಲಾಖೆಯ ವತಿಯಿಂದ ರಕ್ಷಣೆ ಒದಗಿಸಲಾಗಿತ್ತು. ಈ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕುರಿತು ಅಭಿಪ್ರಾಯವನ್ನು ಹಂಚಿಕೊಂಡ ಸಾರ್ವಜನಿಕರು ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಬಿ ಇಡಿ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಸಿ ಎಲ್ ಶಿವಣ್ಣ, ಬಿ ಇಡಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಎಂ ಶೋಭಾ, ಜಿ. ಹಂಪೇಶ್, ಪೊಲೀಸ್ ಇಲಾಖೆಯ ನಾಗರಾಜು, ಪಟ್ಟಣ ಪಂಚಾಯಿತಿಯ ನೌಕರರು ಹಾಗೂ ಸಾರ್ವಜನಿಕರು ಹಾಜರಿದ್ದರು.
