Ticker

6/recent/ticker-posts

ನಾಗಮಂಗಲ: ಪಠ್ಯದ ಜೊತೆಗೆ ಒಂದು ಕಲೆಯನ್ನು ‌ಕಲಿತರೆ ವಿದ್ಯಾರ್ಥಿಗಳ ಕ್ಷಮತೆ ಹೆಚ್ಚಾಗುತ್ತದೆ

ನಾಗಮಂಗಲ: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯದೊಂದಿಗೆ ಪೂರಕವಾಗುವಂತೆ ಯಾವುದಾದರೊಂದು‌ ಕಲೆಯನ್ನು ಕಲಿತರೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ವೀಣಾ ಅಠವಲೆ ಹೇಳಿದರು.
                          ತಾಲ್ಲೂಕಿನ ಆದಿಚುಂಚನಗಿರಿ ವೈದ್ಯಕೀಯ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು.ಇಂದಿನ ಯುಗದಲ್ಲಿ ವಿದ್ಯಾವಂತರು ಸರ್ವರಿಂದಲೂ ಮನ್ನಣೆ ಪಡೆಯುತ್ತಾರೆ. ವಿದ್ಯಾರ್ಥಿಗಳು ಎಂದಿಗೂ ಅಂಕ ಸಂಪಾದನೆಯನ್ನು ಮಾತ್ರವೇ ಮಾನದಂಡವಾಗಿಸದೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂದರು.

     ಅಲ್ಲದೇ ವಿದ್ಯಾರ್ಥಿಗಳು ಪಡೆಯುವ ಶಿಕ್ಷಣವು ಅವರ ಭವಿಷ್ಯ ರೂಪಿಸುವಂತಹ ಕೌಶಲವನ್ನು ಬೆಳೆಸಬೇಕು.ಆಗ ಮಾತ್ರವೇ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ.ಜೊತೆಗೆ ವಿದ್ಯಾರ್ಥಿಗಳು ಸಂಕುಚಿತ ಮನೋಭಾವ ಬೆಳೆಸಿಕೊಳ್ಳದೇ ನಾವು ಬದುಕುವ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಆರೋಗ್ಯಯುತ ಪರಿಸರ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.

   ಮುಖ್ಯ ಅಥಿತಿಯಾಗಿದ್ದ ಸುಭಾಷ್ ನರೇಂದ್ರ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ರಂಗ ಕಲೆಯಲ್ಲಿ ಇದ್ದ ಅತ್ಯಂತ ಅವಿನಾಭಾವ ಗುರು ಶಿಷ್ಯರ ಪರಂಪರೆಯನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಚಂದ್ರಶೇಖರ ಕಂಬಾರರ ವಿರಚಿತ ಗೀತೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.

ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಡಾ ಡಿ ವೆಂಕಟೇಶ್,ಆದಿಚುಂಚನಗಿರಿ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ ವಿ ಡಿ ಪ್ರಸಾದ್,ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಕುಲಸಚಿವ ಬಿ ಕೆ ಉಮೇಶ್ ಮತ್ತು ಡಾ ಬಿ ಜಿ ಸಾಗರ್ ಇದ್ದರು.