ತುಮಕೂರು:ತುಮಕೂರಿನ ಎನ್.ಆರ್. ಕಾಲೋನಿ, ಕೋತಿತೋಪು ದಸರಾ ಮೈದಾನದಲ್ಲಿರುವ 'ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘ (ರಿ.)' (ಬುದ್ಧ ಬಸವ ಅಂಬೇಡ್ಕರ್ ಫುಟ್ಬಾಲ್ ಕ್ಲಬ್) ಹಾಗೂ 'ಸಾಮಾಜಿಕ ನ್ಯಾಯ ವೇದಿಕೆ, ತುಮಕೂರು' ಇವುಗಳ ಸಹಯೋಗದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ 70ನೇ ಧರ್ಮ ದೀಕ್ಷಾ ದಿನ (ಧಮ್ಮಚಕ್ರ ಪ್ರವರ್ತನ ದಿನ) ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಮಾಜಕ್ಕೆ ನೀಡಿದ ನಿಸ್ಸ್ವಾರ್ಥ ಸೇವೆ ಹಾಗೂ ಪರಿವರ್ತನಾ ಶಕ್ತಿಯನ್ನು ಗುರುತಿಸಿ ರಾಘವೇಂದ್ರ ಜಿ. ಪಾಟೀಲ ಅವರಿಗೆ 'ಪರಿವರ್ತನಾ ಸಮಾಜ ಸೇವಾ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಕೃಷ್ಣ ಅವರು ಸ್ವಾಗತ ಭಾಷಣದಲ್ಲಿ ಮಾತನಾಡಿ
"ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳು ಹಾಗೂ ಸಾಮಾಜಿಕ ಸಮಾನತೆಯ ವಿಚಾರಗಳನ್ನು ಯುವ ಪೀಳಿಗೆಗೆ ತಲುಪಿಸುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ನಿಸ್ಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಜಿ. ಪಾಟೀಲ ಅವರಂತಹ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ" ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಮೋಹನ್ ಟಿ.ಆರ್. ಅವರ ಮಾತನಾಡಿ
"ಧರ್ಮ ದೀಕ್ಷಾ ದಿನವು ಕೇವಲ ಒಂದು ಐತಿಹಾಸಿಕ ದಿನವಲ್ಲ, ಅದು ಸಾಮಾಜಿಕ ಪರಿವರ್ತನೆ ಮತ್ತು ಮಾನವ ಘನತೆಯ ಸಂಕೇತವಾಗಿದೆ. ನಮ್ಮ ಸಂಘಟನೆಯು ಕ್ರೀಡೆ, ಕಲೆ ಹಾಗೂ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಯುವಕರನ್ನು ಸಂಘಟಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ" ಎಂದರು.
ಪ್ರಶಸ್ತಿ ಸ್ವೀಕರಿಸಿದ ರಾಘವೇಂದ್ರ ಜಿ. ಪಾಟೀಲ ಅವರು
"ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘ ಹಾಗೂ ಸಾಮಾಜಿಕ ನ್ಯಾಯ ವೇದಿಕೆಯ ವತಿಯಿಂದ ನನಗೆ 'ಪರಿವರ್ತನಾ ಸಮಾಜ ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯನ್ನು ತಂದಿದೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 70ನೇ ಧರ್ಮ ದೀಕ್ಷಾ ದಿನದಂತಹ ಪವಿತ್ರ ಹಾಗೂ ಐತಿಹಾಸಿಕ ದಿನದಂದು ಈ ಸನ್ಮಾನ ದೊರೆತಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಮುಖಿ ಕೆಲಸಗಳಿಗೆ ಸಿಗುವ ಇಂತಹ ಪ್ರೋತ್ಸಾಹಗಳು ನಿಸ್ಸ್ವಾರ್ಥ ಸೇವೆಯನ್ನು ಮುಂದುವರಿಸಲು ದೊಡ್ಡ ಶಕ್ತಿಯಾಗುತ್ತವೆ ಎಂದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೊಡ್ಡ ಚಿಕ್ಕಣ್ಣ ಅವರು ಮಾತನಾಡಿ
"ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿದ ಅಹಿಂಸೆ, ಸಮಾನತೆ ಹಾಗೂ ಪ್ರಜ್ಞಾವಂತ ಸಮಾಜದ ನಿರ್ಮಾಣದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪರಿವರ್ತನಾ ಸಂಘಟನೆಯು ಈ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ" ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು ಹಾಗೂ ಸಂಘವು ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಹೇಶ್ ಜೆ ವೈದ್ಯಕೀಯ ವಿದ್ಯಾರ್ಥಿ, ಹಾಗೂ ವಂದನಾರ್ಪಣೆಯನ್ನು ಕುಮಾರಿ ಲಕ್ಷ್ಮಿ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ರಂಗಮ್ಮ, ಹಾಗೂ ಸದಸ್ಯರು, ಶಿಬಿರಾರ್ಥಿಗಳು, ವಿದ್ಯಾರ್ಥಿಗಳು
ಸ್ಥಳೀಯರು ಭಾಗವಹಿಸಿದ್ದರು.
