ಕೆ.ಎಂ ದೊಡ್ಡಿ:-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಹಳ್ಳಿಕಾರ್ ಎತ್ತುಗಳ ರಾಜ್ಯಮಟ್ಟದ ಪ್ರದರ್ಶನದಲ್ಲಿ, ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಅಲಭುಜನಹಳ್ಳಿ ಗ್ರಾಮದ ಪ್ರಗತಿಪರ ರೈತ ಕೀರ್ತಿ ಅವರಿಗೆ ಸೇರಿದ ಆಕರ್ಷಕ ಜೋಡಿ ಎತ್ತುಗಳು ಪ್ರಥಮ ಬಹುಮಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿವೆ.
ನಾಡಹಬ್ಬ ದಸರಾ ಉತ್ಸವದ ಸಂಪ್ರದಾಯದಂತೆ ಜರುಗಿದ ಈ ಜಾನುವಾರು ಪ್ರದರ್ಶನದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಅತ್ಯುತ್ತಮ ತಳಿಯ ಹಳ್ಳಿಕಾರ್ ಜೋಡಿ ಎತ್ತುಗಳು ಭಾಗವಹಿಸಿದ್ದವು. ತಳಿಯ ಶುದ್ಧತೆ, ಮೈಕಟ್ಟು, ಗತ್ತು, ಕೊಂಬಿನ ಅಂದ ಮತ್ತು ಮೈಕಾಂತಿಯ ಆಧಾರದ ಮೇಲೆ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದರು.
ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಅಲಭುಜನಹಳ್ಳಿಯ ಕೀರ್ತಿ ಅವರ ಒಡೆತನದ ಹಳ್ಳಿಕಾರ್ ಎತ್ತುಗಳು ತಮ್ಮ ಗಾಂಭೀರ್ಯ ಹಾಗೂ ಸುಂದರ ಮೈಕಟ್ಟಿನಿಂದ ತೀರ್ಪುಗಾರರ ಹಾಗೂ ಹಳ್ಳಿಕಾರ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಈ ಜೋಡಿ ಎತ್ತುಗಳು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕದೊಂದಿಗೆ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡವು.
ತಮ್ಮ ಹಳ್ಳಿಕಾರ್ ಎತ್ತುಗಳಿಗೆ ದಸರಾದಲ್ಲಿ ಮೊದಲನೇ ಬಹುಮಾನ ಲಭಿಸಿರುವುದಕ್ಕೆ ಕೃಷಿಕ ಕೀರ್ತಿ ಹಾಗೂ ಅವರ ಕುಟುಂಬ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೆ.ಎಂ.ದೊಡ್ಡಿ ಮತ್ತು ಅಲಭುಜನಹಳ್ಳಿ ಗ್ರಾಮದ ಸುತ್ತಮುತ್ತಲಿನ ರೈತರು, ಹಳ್ಳಿಕಾರ್ ತಳಿ ಸಂರಕ್ಷಕರು
ಕೆ.ಎಂ ದೊಡ್ಡಿಯ ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘುವೆಂಕಟೆಗೌಡ ಹಾಗೂ ಪ್ರಜಾಪ್ರಿಯ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್ ರವರು ವಿಜೇತರಿಗೆ ಹೂಹಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಾಟಿ ತಳಿಗಳ ಸಂರಕ್ಷಣೆಗೆ ಇಂತಹ ಸ್ಪರ್ಧೆಗಳು ಮತ್ತಷ್ಟು ಪ್ರೋತ್ಸಾಹ ನೀಡಲಿ ಎಂದು ಸ್ಥಳೀಯ ರೈತರು ಅಭಿಪ್ರಾಯಪಟ್ಟಿದ್ದಾರೆ.
*ವರಧಿ :- ಸಂತೋಷ್ ಟಿಬಿ*
