*ಕೆ.ಎಂ ದೊಡ್ಡಿ:-ದೇಶದ ರಾಜಕೀಯ ಇತಿಹಾಸದಲ್ಲಿ ಸದಾ ಕಾಲ ದುಡಿಯುವ ವರ್ಗ, ಶ್ರಮಿಕರು ಮತ್ತು ಬಡವರ ಪರವಾಗಿ ಧ್ವನಿಯಾಗಿರುವ ಕಾಂಗ್ರೆಸ್ ಪಕ್ಷ, ನುಡಿದಂತೆ ನಡೆಯುವ ಮೂಲಕ ಜನಪರ ಆಡಳಿತಕ್ಕೆ ಹೊಸ ಮಾದರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 'ಪಂಚ ಗ್ಯಾರಂಟಿ’ ಯೋಜನೆಗಳು ಇಂದು ಕೋಟ್ಯಂತರ ಬಡವರ ಬದುಕಿಗೆ ಆಸರೆಯಾಗಿವೆ ಹಾಗೆಯೇ ಮದ್ದೂರು ತಾಲೂಕಿನಲ್ಲಿ
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಎಂದೆಂದಿಗೂ ಬಡವರು ಮತ್ತು ಕೂಲಿ ಕಾರ್ಮಿಕರ ಪರವಾಗಿ ಸದಾ ನಿಲ್ಲುತ್ತ ಬಂದಿದ್ದು ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಸೇವೆ ಸಲ್ಲಿಸುತ್ತದೆ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ ಉದಯ್ ತಿಳಿಸಿದರು.
ಕೆ.ಎಂ ದೊಡ್ಡಿಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗ ಹಾಗೂ ಮದ್ದೂರು ತಾಲೂಕು ಭಾರತೀನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಸಮಿತಿಯ ವತಿಯಿಂದ ಭಾರತೀನಗರದಲ್ಲಿ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ವಿತರಣೆ, ನೊಂದಣಿ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ನಾಲ್ಕೂ ವರ್ಷದ ಹಿಂದೇ ನಾನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ 'ಉದಯ ಯಾನ' ಎಂಬ ಕಾರ್ಯಕ್ರಮ ವನ್ನು ಮಾಡಿ ಮಧ್ಯವ ವರ್ಗದವರಿಗೆ ಶ್ರಮಿಕರಿಗೆ ದುಡಿಯುವ ಕೂಲಿ ಕಾರ್ಮಿಕರಿಗೆ ಅಗತ್ಯ ಆಹಾರ ಧಾನ್ಯಗಳ ಕಿಟ್ ಗಳನ್ನು ಹಾಗೂ ಆರ್ಥಿಕ ನೆರವು ನೀಡಲಾಗಿತ್ತು ಹಾಗೆಯೇ ಕದಲೂರು ಚಾರಿಟಬಲ್ ಟ್ರಸ್ಟ್ ನಿರಂತರವಾಗಿ ಬಡವರ ಕಲ್ಯಾಣಕ್ಕಾಗಿ
ಕೂಲಿ ಕಾರ್ಮಿಕರು ಹಾಗೂ ಬಡ ರೈತ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದರು.
ನಾನು ಶಾಸಕನಾದ ನಂತರ ಕ್ಷೇತ್ರಕ್ಕೆ ಎರಡೂ ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಅಭಿವೃದ್ಧಿಗೆ ಕ್ಷೇತ್ರದ ಜನತೆಯ ತೀರ್ಮಾನವೇ ಶ್ರೀರಕ್ಷೆ,ರಾಜಕಾರಣ ಬೇರೆ, ಅಭಿವೃದ್ಧಿಯ ವಿಚಾರವೇ ಬೇರೆ ಎಂದು ಸ್ಪಷ್ಟಪಡಿಸಿದ ಅವರು, "ದೇಶದ ಅಭಿವೃದ್ಧಿ ಎನ್ನುವುದು ನಿಮ್ಮೆಲ್ಲರ ತೀರ್ಮಾನದ ಮೇರೆಗೆ ನಿಂತಿದೆ.
ದುಡಿಯುವ ವರ್ಗ ಸದಾ ಪರಿಶ್ರಮ ನಂಬುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ನಮ್ಮ ಪಕ್ಷಕ್ಕೆ 138 ಸ್ಥಾನಗಳನ್ನು ನೀಡಿ ಅಧಿಕಾರಕ್ಕೆ ತಂದಿದ್ದು, ಅಂದಿನಿಂದಲೂ ನಮ್ಮ ಸರ್ಕಾರ ಬಡವರ ಮತ್ತು ಶ್ರಮಿಕರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. ಕಾಂಗ್ರೆಸ್ ಸರ್ಕಾರವು ವರ್ಷಕ್ಕೆ 50,000 ಕೋಟಿ ರೂಪಾಯಿಗಳ ವಿವಿಧ ಜನಪರ ಯೋಜನೆಗಳ ಮೂಲಕ ಕಾರ್ಮಿಕ ವರ್ಗಕ್ಕೆ ಬಲ ತುಂಬುತ್ತಿದೆ" ಎಂದರು.
ದೇಶದಲ್ಲೇ ಮಾದರಿಯಾದ ಜನಪರ ಸರ್ಕಾರ
ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯಂತ ಯಶಸ್ವಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಶಾಸಕರು, ಯಾವುದೇ ಜಾತಿ-ಮತದ ಭೇದವಿಲ್ಲದೆ ರೈತರು, ಮಹಿಳೆಯರು, ಕಾರ್ಮಿಕರು ಹಾಗೂ ದುರ್ಬಲ ವರ್ಗದವರಿಗೆ ಹಲವಾರು ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಟಿಎಪಿಸಿಎಂಸಿ ನಿರ್ದೇಶಕ ಹಾಗೂ ಮದ್ದೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗೊರವನಹಳ್ಳಿ ರಾಘು, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ರಾಮಕೃಷ್ಣ, ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ನವೀನ್ ಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಮಹಮದ್ ಫಾರೂಕ್, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ, ಕಾರ್ಯಕ್ರಮದ ಆಯೋಜಕರಾದ ತಿಮ್ಮಯ್ಯ, ಅಣ್ಣೂರು ರಾಮಣ್ಣ, ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಸಂತಮ್ಮ ಸೇರಿದಂತೆ ಅನೇಕ ಮುಖಂಡರು ಮತ್ತು ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.
*ವರಧಿ :- ಸಂತೋಷ್ ಟಿಬಿ*
