ಹಲಗೂರು: ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಆರಾಧ್ಯ ದೇವತೆ ಶ್ರೀ ಬೆಟ್ಟದರಸಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ನವರಾತ್ರಿಯ ಆರನೇ ದಿನವಾದ ಶುಕ್ರವಾರ ಕಾತ್ಯಾಯಿನಿ ದೇವಿಯ ಹೆಸರಿನಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಯ ಮೂರ್ತಿಗೆ ಹಾಲು ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ದೇವಾಲಯದ ಅರ್ಚಕ ಪುಟ್ಟಮಲ್ಲಪ್ಪ ಮಾತನಾಡಿ, ಬೆಟ್ಟದರಸಮ್ಮ ನಮ್ಮ ಆರಾಧ್ಯ ದೈವ ಹಾಗೂ ಶಕ್ತಿ ದೇವತೆಯಾಗಿದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ನವರಾತ್ರಿ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೇವಿರಹಳ್ಳಿ ಗ್ರಾಮದ ಪಟೇಲ್ ರಾಜಣ್ಣ ಮಾತನಾಡಿ, ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದರಸಮ್ಮ ಗುಂಡಾಪುರ ಸೇರಿದಂತೆ ಸುತ್ತಮುತ್ತಲಿನ ಒಂಬತ್ತು ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ. ತಾಯಿಯ ಮೇಲೆ ಅಪಾರ ಭಕ್ತಿ ಹೊಂದಿದ್ದು, ಎರಡು ಬಾರಿ ತನ್ನ ಪ್ರಾಣವನ್ನು ಕಾಪಾಡಿದ್ದಾಳೆ. ತಾಯಿಯ ಕೃಪೆಯಿಂದ ಇಂದು ಬದುಕಿದ್ದೇನೆ. ನಂಬಿದ ಭಕ್ತರನ್ನು ತಾಯಿ ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ತೊರೆಕಾಡನಹಳ್ಳಿಯ ಮೂರ್ತಿ, ವಿಜಯ, ಸಹನಾ, ಬಿಂದು, ಶಶಿ, ಯತೀಶ್, ಅನಿಲ್ ಕುಮಾರ್, ಕುಮಾರ್ ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.
