*ಕೆ.ಎಂ ದೊಡ್ಡಿ :-ಮಹಿಳೆಯರಲ್ಲಿನ ಶಿಸ್ತು ,ತಾಳ್ಮೆ ಮತ್ತು ಕ್ರಿಯಾಶೀಲ ಬದ್ಧತೆಯೂ ಕುಟುಂಬವನ್ನು ಮತ್ತು ಸಮಾಜವನ್ನು ಪ್ರಗತಿ ಕಡೆಗೆ ಕೊಂಡೊಯ್ಯುತ್ತಿರುವುದು ಮಾದರಿ ನಡೆಯಾಗಿದೆ, ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ ಮತ್ತು ಅತಿಮುಖ್ಯವಾದದ್ದು. ಒಬ್ಬ ಮಹಿಳೆ ಕೇವಲ ಒಂದು ಕುಟುಂಬದ ನಿರ್ವಹಣೆಗೆ ಮಾತ್ರ ಸೀಮಿತಳಾಗದೆ, ಇಡೀ ಸಮಾಜದ ಪ್ರಗತಿಗೆ ಮುನ್ನಡಿಯಾಗಿದ್ದಾಳೆ ಎಂದು ಮದ್ದೂರು ಶಾಸಕ ಕೆ.ಎಂ ಉದಯ್ ತಿಳಿಸಿದರು.
ಕೆ.ಎಂ. ದೊಡ್ಡಿ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸಂಜೀವಿನಿ ಮಹಿಳಾ ಭವನ’ ಉದ್ಘಾಟನೆ ಹಾಗೂ ಕೆ.ಶೆಟ್ಟಹಳ್ಳಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಉದ್ಘಾಟಿಸಿ ಮಾತನಾಡಿದರು.
ಶಾಸಕ ಕೆ.ಎಂ ಉದಯ್ ಮಾತನಾಡಿ ಮಂಡ್ಯ ಜಿಲ್ಲೆಯು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಹೊಂದಿರುವ ಹಾಗೂ ಸಂಪೂರ್ಣ ಕೃಷಿ ಅವಲಂಬಿತ ಜಿಲ್ಲೆಯಾಗಿದೆ. ಇಲ್ಲಿ ನೀರಿನ ಕೊರತೆ ಹಾಗೂ ಬೆಲೆ ಕುಸಿತದಂತಹ ಸಂಕಷ್ಟದ ಸಂದರ್ಭಗಳಲ್ಲೂ ಸಹ ಕುಟುಂಬಗಳನ್ನು ದೃಢತೆಯಿಂದ ಮುನ್ನಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿಯನ್ನು ನಮ್ಮ ಹೆಣ್ಣಮಕ್ಕಳು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ," ಎಂದು ಅವರು ಬಣ್ಣಿಸಿದರು.
ಈ ಹಿಂದೆ ಕೇವಲ ಮನೆಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು, ಇಂದು ಕುಟುಂಬ ನಿರ್ವಹಣೆಯ ಜೊತೆಗೆ ಸ್ಥಳೀಯ ಹೈನುಗಾರಿಕೆ ಮತ್ತು ಇತರೆ ಸ್ವಾವಲಂಬನೆ ಚಟುವಟಿಕೆಗಳ ಮೂಲಕ ಜೀವನ ನಿರ್ವಹಣೆಗೆ ಭದ್ರವಾದ ಬೆಂಬಲ ಒದಗಿಸುತ್ತಿದ್ದಾರೆ. ಆರ್ಥಿಕ ವ್ಯವಹಾರಗಳಲ್ಲಿ ಮಹಿಳೆಯರು ತೋರುತ್ತಿರುವ ಪ್ರಾಮಾಣಿಕ ಪ್ರಯತ್ನವು ನಿಜಕ್ಕೂ ಶ್ಲಾಘನೀಯ ಎಂದರು.
ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ಮನೆಗೆಷ್ಟೇ ಸೀಮಿತರಾಗದೆ, ಸ್ವ-ಸಹಾಯ ಸಂಘಗಳು (SHG), ಹೈನುಗಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಹೊಲಿಗೆ, ಹಾಗೂ ಕಿರು ಉದ್ಯಮಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ.
ಸದ್ಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಮೀಸಲಾತಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮಾತನಾಡಿದ ಶಾಸಕರು, ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗದೆ,
ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಗ್ರಾಮದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಅಮೂಲ್ಯ ಸಲಹೆ ಮತ್ತು ಸಹಕಾರವನ್ನು ನೀಡಬೇಕೆಂದು ಕರೆ ನೀಡಿದರು.
ಮದ್ದೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಮಾತನಾಡಿ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿನ ಸಂಜೀವಿನಿ ಮಹಿಳಾ ಒಕ್ಕೂಟವು ತಾಲೂಕಿನಲ್ಲಿರುವ ಯಶಸ್ವಿ ಓಕ್ಕೂಟವಾಗಿದೆ ಕಳೆದ ಐದು ವರ್ಷಗಳಲ್ಲಿ 50 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆಸಿ ಹಲವರಿಗೆ ಸಾಲ ಸೌಲಭ್ಯವನ್ನು ನೀಡಿ ಶಿಸ್ತಿನಿಂದ ಸಾಲ ಮರುಪಾವತಿ ಮಾಡಿ ಗ್ರಾಮದಲ್ಲಿನ ಮಹಿಳೆಯರನ್ನು ಅರ್ಥಿಕವಾಗಿ ಸಬಲೀಕರಣಗೊಳ್ಳುವಂತೆ ಮಾಡಿದ್ದಾರೆ ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳನ್ನು ಸಮಪರ್ಕ ಸದ್ಬಳಕೆ ಮಾಡಿಕೊಂಡು ವಹಿವಾಟುನ್ನು ಕೋಟಿ ರೂಗಳಿಗೆ ವಿಸ್ತರಣೆ ಮಾಡಲಿ ಎಂದು ಶುಭ ಹಾರೈಸಿದರು.
ಇದೆ ಸಂದರ್ಭದಲ್ಲಿ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯತ್ ಪಿಡಿಓ ಶಂಭುಲಿಂಗಯ್ಯ,ಸಂಜೀವಿನಿ ಮಹಿಳಾ ಒಕ್ಕೂಟಫಾ ಅಧ್ಯಕ್ಷೆ ವಸಂತಮ್ಮ,ಉಪಾಧ್ಯಕ್ಷೆ ಮಹಾದೇವಮ್ಮ ಕಾರ್ಯದರ್ಶಿ ಪದ್ಮಮ್ಮ ಖಜಾಂಚಿ ಶೋಭಾ,ಆರ್ಚನ,ಯಮುನಾ ಸೇರಿದಂತೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮದ ನೂರಾರು ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
*ವರದಿ: ಸಂತೋಷ್ ಟಿ ಬಿ*
