Ticker

6/recent/ticker-posts

ಲಾರಿ ಬಸ್ ಮುಖಾಮುಖಿ ಡಿಕ್ಕಿ ನಾಲ್ವರ ದುರ್ಮರಣ.,

ಪಿರಿಯಾಪಟ್ಟಣ : ತಾಲೂಕಿನ ಕಿರನಲ್ಲಿ ಗೇಟ್ ಬಳಿ ಶುಕ್ರವಾರ ಬೆಳಗಿನ ಜಾವ ಸುಮಾರು 3.30 ರ ಸಮಯದಲ್ಲಿ ಬಿ.ಎಂ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್‌  ಹಾಗೂ ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ  ನಾಲ್ವರು ಮೃತಪಟ್ಟಿದ್ದು, 35 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನಿಂದ ಕೇರಳದತ್ತ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ 
ಸುನಿಲ್  (28) ಬಿನ್ ಶ್ರೀನಿವಾಸ್ 
  ಮೈಸೂರು ಇವರು
ಖಾಸಗಿ  ಬಸ್ ಡ್ರೈವರ್,  ಸಗೇಶ್ (30 ವರ್ಷ) 
ಬಸ್ ಕ್ಲೀನರ್. 
ಕೇರಳ ಮೂಲದ ವ್ಯಕ್ತಿಯಾಗಿದ್ದಾರೆ.
ಅಫ್ತಾಬ್ (26 ವರ್ಷ) ಕೇರಳದ
ಕ್ಯಾಲಿಕಟ್ ನಿವಾಸಿ ಹಾಗೂ ಶಿಬಿಲ್ ಆಡಮ್ (32)ಬಿನ್ ಆಡಂ ಕುನ್ನಿಕದನ್  ಕೇರಳ ರಾಜ್ಯದವರಾಗಿದ್ದಾರೆ. ಶುಕ್ರವಾರ ಬೆಳಗಿನ ಜಾವ 3:30 ರ ಸಮಯದಲ್ಲಿ ಮೈಸೂರು ಕಡೆಯಿಂದ ಕೇರಳದತ್ತ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಹಾಗೂ ಪಿರಿಯಾ ಪಟ್ಟಣದಿಂದ ಮೈಸೂರು ಕಡೆಗೆ ಸಾಗುತ್ತಿದ್ದ ಲಾರಿ ಬಿ.ಎಂ.ರಸ್ತೆಯ ಕಿರನಲ್ಲಿ ಗೇಟ್ ಸಮೀಪ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ ಎನ್ನಲಾಗಿದೆ.  

ಡಿಕ್ಕಿಯ ರಭಸಕ್ಕೆ ಬಸ್ ಜಖಂಗೊಂಡಿದ್ದು, ಅದರೊಳಗಿದ್ದ ಪ್ರಯಾಣಿಕರಿಗೆ ಬೆನ್ನುಮೂಳೆ, ಕೈಕಾಲು, ಸೊಂಟ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಳಿದ ಮೃತರ ಗುರುತು ಮತ್ತು ಅಪಘಾತದ ಸಂಪೂರ್ಣ ವಿವರಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಾದಂತೆ ಸ್ಪಷ್ಟವಾಗಬೇಕಿದೆ.
ರಕ್ಷಣಾ ಕಾರ್ಯಾಚರಣೆ :

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.


ಅಪಘಾತದ ತೀವ್ರತೆಗೆ ಬಸ್ ಜಖಂಗೊಂಡಿದ್ದರಿಂದ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಗಾಯಾಳುಗಳನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತು. ಈ ವೇಳೆ ಬಸ್‌ನ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು.

ಬಸ್ ಚಾಲಕನ ಮೃತ ದೇಹದ ಒಂದು ಕಾಲು ಬಸ್‌ನೊಳಗೆ ಸಿಲುಕಿಕೊಂಡಿದ್ದರಿಂದ ಅದನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹೆಚ್ಚುವರಿ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ತಿಳಿಸಲಾಗಿದೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯಕ್ಕೆ ನೆರವು ನೀಡಿದರು.

ಆಸ್ಪತ್ರೆಗಳಿಗೆ ಗಾಯಾಳುಗಳ ರವಾನೆ :

ಗಾಯಗೊಂಡ ಪ್ರಯಾಣಿಕರನ್ನು ಆಂಬುಲೆನ್ಸ್‌ಗಳ ಮೂಲಕ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿನ ವೈದ್ಯರು ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ


ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಕೇರಳ ಮೂಲದವರು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. ಲಾರಿ ಚಾಲಕ ಸೇರಿದಂತೆ ಇತರರಿಗೆ ಗಾಯಗಳಾಗಿವೆಯೇ ಎಂಬುದರ ಕುರಿತು ಹೆಚ್ಚಿನ ದೃಢೀಕೃತ ಮಾಹಿತಿ ಅಗತ್ಯವಿದೆ.

ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ :
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಯಿತು. ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸಿದರು. ಬಳಿಕ ಕ್ರೇನ್ ಮತ್ತು ಜೆಸಿಬಿ ಯಂತ್ರಗಳ ನೆರವಿನಿಂದ ಅಪಘಾತಕ್ಕೀಡಾದ ಬಸ್ ಹಾಗೂ ಲಾರಿಯನ್ನು ರಸ್ತೆಯ ಬದಿಗೆ ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದೇಹಗಳನ್ನು ಪಿರಿಯಾಪಟ್ಟಣದ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ವರ್ಗದವರಿಗೆ ಹಸ್ತಾಂತರಿಸಲಾಗಿದೆ.