Ticker

6/recent/ticker-posts

"ಗುಡಿಸಲು ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ: ಶಾಸಕ ಸುರೇಶ್"

ಬೇಲೂರು :-ಜೂನಿಯರ್ ಕಾಲೇಜು ಹಿಂಭಾಗದಲ್ಲಿ ವಾಸಿಸುತ್ತಿರುವ ಗುಡಿಸಲು ನಿವಾಸಿಗಳಿಗೆ ರಾಯಪುರ ಗ್ರಾಮದ ಬಳಿ ನಿವೇಶನ ನೀಡಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಶನಿವಾರ ನಡೆದ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಮೊದಲ ಹಂತದಲ್ಲಿ ಗುಡಿಸಲು ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಬಳಿಕ ಉಳಿಯುವ ನಿವೇಶನಗಳನ್ನು ಪೌರಕಾರ್ಮಿಕರಿಗೆ ನೀಡಲಾಗುವುದು. ಬಂಟೆನಹಳ್ಳಿ ಬಳಿ ಇರುವ ನಿವೇಶನಗಳಲ್ಲಿ ಪಟ್ಟಣದ ಕಡುಬಡವರಿಗೆ ಮೊದಲ ಆದ್ಯತೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು’
‘ಪುರಸಭಾ ಸದಸ್ಯರ ಅವಧಿ ಮುಕ್ತಾಯಗೊಂಡಿದ್ದರೂ ಅವರು ನನ್ನ ಪಾಲಿಗೆ ಇನ್ನೂ ಜನಪ್ರತಿನಿಧಿಗಳೇ. ನಾನು ಶಾಸಕನಾಗಿರುವವರೆಗೆ ಹಾಗೂ ಮುಂದಿನ ಅವಧಿಗೂ ಆಯ್ಕೆಯಾದಲ್ಲಿ ವಾರ್ಡ್‌ಗಳ ಅಭಿವೃದ್ಧಿ ಕಾರ್ಯಗಳಲ್ಲಿ ಜವಾಬ್ದಾರಿಯಿಂದ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಯಾವುದೇ ಅನುದಾನ ನೀಡದ ಸಂದರ್ಭದಲ್ಲಿಯೂ ನಮ್ಮ ಮನವಿಗೆ ಸ್ಪಂದಿಸಿ ಅಂದಿನ ಸಚಿವ ರಹೀಂ ಖಾನ್ ಅವರ ಮೂಲಕ ₹12 ಕೋಟಿ ಅನುದಾನವನ್ನು ಪುರಸಭೆಗೆ ತರಲಾಗಿದೆ.

 ಕ್ಷೇತ್ರದಲ್ಲಿ ಅನುದಾನ ಹಂಚಿಕೆ ಮಾಡುವಾಗ ಯಾವುದೇ ತಾರತಮ್ಯ ಮಾಡಿಲ್ಲ’
‘ನಾನು ರಾಜಕಾರಣ ಮಾಡಲು ಬಂದಿದ್ದೇನೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ವರ್ಷಪೂರ್ತಿ ರಾಜಕೀಯ ಮಾಡುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಂದು ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತೇನೆ’ ಎಂದರು.

ಪುರಸಭೆ ಸದಸ್ಯ ಬಿ.ಸಿ.ಜಗದೀಶ್ ಮಾತನಾಡಿ, ‘ಶಾಸಕರು ಪಕ್ಷಭೇದ ಮರೆತು ಪುರಸಭೆಗೆ ಸಮರ್ಪಕವಾಗಿ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಪುರಸಭೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವ ವಿಶ್ವಾಸವಿದೆ’ ಎಂದರು.

ಸದಸ್ಯ ಬಿ.ಗಿರೀಶ್ ಮಾತನಾಡಿ, ‘ಈ ಹಿಂದೆ ಪುರಸಭೆಗೆ ಮಂಜೂರಾಗಿದ್ದ ₹12 ಕೋಟಿ ಅನುದಾನವನ್ನು ಸರ್ಕಾರದ ಮೇಲೆ ಪ್ರಭಾವ ಬೀರಿ ವಾಪಸ್ ತರಲು ಶಾಸಕರು ಪ್ರಯತ್ನಿಸಿರುವುದು ಶ್ಲಾಘನೀಯ. ಬಾಕಿ ಉಳಿದಿರುವ ಅಭಿವೃದ್ಧಿ ಹಾಗೂ ವೈಯಕ್ತಿಕ ಸೌಲಭ್ಯಗಳಿಗೂ ಶಾಸಕರು ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಸದಸ್ಯೆ ತೀರ್ಥಕುಮಾರಿ ಮಾತನಾಡಿ, ‘ನಮ್ಮ ಅವಧಿಯಲ್ಲಿಯೇ ಬೇಲೂರನ್ನು ಗುಡಿಸಲು ಮುಕ್ತ ಪಟ್ಟಣವನ್ನಾಗಿಸುವ ಉದ್ದೇಶವಿತ್ತು. ಆದರೆ ನಿವೇಶನ ಹಂಚಿಕೆ ಪೂರ್ಣಗೊಳಿಸಲಾಗಲಿಲ್ಲ. ಅಲ್ಲದೆ ನೀರು ಶುದ್ಧೀಕರಣ ಕೇಂದ್ರ ಇನ್ನೂ ಉದ್ಘಾಟನೆಯಾಗದಿರುವುದು ಬೇಸರ ತಂದಿದೆ’ ಎಂದರು.

ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಮಾತನಾಡಿ, ‘ನಮ್ಮ ಅವಧಿಯಲ್ಲಿ ಪೌರಕಾರ್ಮಿಕರು ಹಾಗೂ ಬಡವರಿಗೆ ನಿವೇಶನ ನೀಡಬೇಕೆಂಬ ಹಂಬಲವಿತ್ತು. ಇದೀಗ ನಮ್ಮ ಅವಧಿ ಮುಕ್ತಾಯಗೊಂಡಿದ್ದು, ಈ ವಿಚಾರದಲ್ಲಿ ಶಾಸಕರು ಗಮನಹರಿಸಬೇಕು. ಬೇಲೂರಿನ ಅಭಿವೃದ್ಧಿಗೆ ಯಾವುದೇ ಪಕ್ಷಪಾತವಿಲ್ಲದೆ ಅನುದಾನ ನೀಡಿರುವ ಶಾಸಕರಿಗೆ ಅಭಿನಂದನೆಗಳು’ ಎಂದರು.

ಸದಸ್ಯೆ ಸೌಮ್ಯ ಸುಬ್ರಹ್ಮಣ್ಯ ಮಾತನಾಡಿ, ‘ಹೊಳೆಬೀದಿ ಪ್ರದೇಶವು ಕೋಳಿ ಅಂಗಡಿಗಳ ತಾಣವಾಗುತ್ತಿದೆ. ಇದಕ್ಕೆ ನನ್ನನ್ನೇ ಹೊಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಮಧ್ಯಪ್ರವೇಶಿಸಿ ಕೋಳಿ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ, ಉಪಾಧ್ಯಕ್ಷ ಸತೀಶ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಾಸಕ ಎಚ್.ಕೆ.ಸುರೇಶ್ ಅವರು ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಬಳಿಕ ಪುರಸಭೆ ವತಿಯಿಂದ ಶಾಸಕರಿಗೂ ಸನ್ಮಾನಿಸಲಾಯಿತು.