ಬೇಲೂರು ನಗರದ ಹೊಸನಗರದಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯವನ್ನು ಶಾಸಕ ಎಚ್.ಕೆ. ಸುರೇಶ್ ಉದ್ಘಾಟಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಉತ್ತಮ ನೈರ್ಮಲ್ಯ ವ್ಯವಸ್ಥೆ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ನಗರದ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದ್ದು, ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಆದರೆ, ಕಾರ್ಯಕ್ರಮದ ವೇಳೆ ಪದೇಪದೇ ವಿದ್ಯುತ್ ಕಡಿತಗೊಂಡಿದ್ದು ವಿಶೇಷ ಗಮನ ಸೆಳೆಯಿತು. ಶಾಸಕರು ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಲವು ಬಾರಿ ವಿದ್ಯುತ್ ಕೈಕೊಟ್ಟ ಪರಿಣಾಮ ಕಾರ್ಯಕ್ರಮ ಕೆಲಕಾಲ ಅಸ್ತವ್ಯಸ್ತವಾಯಿತು. ಕೊನೆಗೆ ಮೊಬೈಲ್ಗಳ ಟಾರ್ಚ್ ಬೆಳಕಿನಲ್ಲೇ ಕಾರ್ಯಕ್ರಮ ಮುಂದುವರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಈ ವೇಳೆ ಮಾತನಾಡಿದ ಹೊಸನಗರ ಬಡಾವಣೆಯ ನಿವಾಸಿ ಅರುಣ್ ಕುಮಾರ್, ಸರ್ಕಾರ ಸ್ವಚ್ಛತೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಹೊಸನಗರದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯದಿಂದ ಜನರಿಗೆ ಅನುಕೂಲವಾಗಲಿದೆ.
ಆದರೆ ಶೌಚಾಲಯದಿಂದ ಹೊರಬರುವ ತ್ಯಾಜ್ಯವನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅದಕ್ಕೆ ಯಾವ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆಯಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು, ಶೌಚಾಲಯದ ತ್ಯಾಜ್ಯವನ್ನು ಗುಂಡಿಯಲ್ಲಿ ಸಂಗ್ರಹಿಸಿ, ನಂತರ ರಾಸಾಯನಿಕ ಬಳಸಿ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಹೊಸನಗರ ಬಡಾವಣೆಯ ನಿವಾಸಿಗಳು, ಇಲ್ಲಿನ ಬಹುತೇಕ ಶೌಚಾಲಯಗಳು ಗುಂಡಿಗಳನ್ನೇ ಅವಲಂಬಿಸಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಉಂಟಾಗುತ್ತಿದೆ. ಆದ್ದರಿಂದ ಮೊದಲು ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ಬಳಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಡಾವಣೆಯಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಪ್ರತಿ ಗಂಟೆಗೊಮ್ಮೆ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿದೆ. ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯುತ್ ವ್ಯತ್ಯಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಶಾಸಕರ ಗಮನಕ್ಕೆ ತಂದರು.
ಹೊಸನಗರ ಬಡಾವಣೆ ಪುರಸಭೆ ವ್ಯಾಪ್ತಿಗೆ ಸೇರಿದ್ದು, ಚುನಾವಣಾ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಮತ ಚಲಾಯಿಸುತ್ತಿದ್ದರೂ ವಿದ್ಯುತ್ ಸಂಪರ್ಕ ಮಾತ್ರ ಗ್ರಾಮೀಣ ವ್ಯಾಪ್ತಿಯ ವ್ಯವಸ್ಥೆಯಲ್ಲಿದೆ. ಇದರಿಂದ ಪದೇಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಬಡಾವಣೆಯನ್ನು ನಗರ ವ್ಯಾಪ್ತಿಯ ವಿದ್ಯುತ್ ಸಂಪರ್ಕಕ್ಕೆ ಒಳಪಡಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದರು.
ಕಾರ್ಯಕ್ರಮದ ನಡುವೆಯೇ ವಿದ್ಯುತ್ ಕಡಿತಗೊಂಡ ಪರಿಣಾಮ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕಾರ್ಯಕ್ರಮ ಮುಂದುವರಿಯುವಂತಾಯಿತು. ಸಾರ್ವಜನಿಕ ಶೌಚಾಲಯ ಉದ್ಘಾಟನೆಯ ಸಂಭ್ರಮದ ನಡುವೆಯೇ ವಿದ್ಯುತ್ ಕಣ್ಣಾಮುಚ್ಚಾಲೆ ಸಾರ್ವಜನಿಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಅಕ್ರಮ್ ಷರೀಫ್, ಸದಸ್ಯರಾದ ಜಗದೀಶ್, ತೀರ್ಥ ಕುಮಾರಿ ವೆಂಕಟೇಶ್, ಮೀನಾಕ್ಷಿ ವೆಂಕಟೇಶ್,ಸೌಮ್ಯ ಸುಬ್ರಹ್ಮಣ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
