Ticker

6/recent/ticker-posts

69ನೇ ವರ್ಷದ ಪೇಟೆ ಗಣಪತಿ ವಿಸರ್ಜನ ಮಹೋತ್ಸವ ಅದ್ಧೂರಿ.

22 ದಿನಗಳ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ; ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಷ್ಣುಸಮುದ್ರದಲ್ಲಿ ವಿಸರ್ಜನೆ.

ಬೇಲೂರು. :-ಪಟ್ಟಣದ ಪೇಟೆ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿ ವಿಸರ್ಜನ ಮಹೋತ್ಸವವು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಅದ್ಧೂರಿಯಾಗಿ ನೆರವೇರಿತು. 

22 ದಿನಗಳ ಕಾಲ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಗಣಪತಿ ವಿಗ್ರಹವನ್ನು ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ಶ್ರೀ ವಿಷ್ಣುಸಮುದ್ರದಲ್ಲಿ ವಿಸರ್ಜಿಸಲಾಯಿತು.

ಪಟ್ಟಣದ ಪೇಟೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಗೆ 22 ದಿನಗಳ ಕಾಲ ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಂಜೆ ವೇಳೆ ರಾಜ್ಯ ಹಾಗೂ ತಾಲೂಕಿನ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳಿಗೆ ಮೆರುಗು ತಂದರು.

ವಿಸರ್ಜನಾ ಮೆರವಣಿಗೆಗೆ ವಿಶೇಷ ಮೆರುಗು ನೀಡಿದ ವೀರಗಾಸೆ, ನಾಸಿಕ್ ಡೋಲ್, ಚಂಡೆ, ರೋಡ್ ಆರ್ಕೆಸ್ಟ್ರಾ, ಡ್ರಮ್‌ಸೆಟ್ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳ ಪ್ರದರ್ಶನ ಜನರ ಗಮನ ಸೆಳೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಗಣಪತಿ ನಾಮಸ್ಮರಣೆಯೊಂದಿಗೆ ಪಾಲ್ಗೊಂಡರು.

   ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಪೈಂಟ್ ರವಿ, ಎಲ್ಲಾ ಭಕ್ತಾದಿಗಳ ಸಹಕಾರದಿಂದ 69ನೇ ವರ್ಷದ ಪೇಟೆ ಗಣಪತಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. 22 ದಿನಗಳ ಕಾಲ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. 

ಇಂದು ಎಲ್ಲರ ಸಹಕಾರದೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಸರ್ಜನಾ ಮೆರವಣಿಗೆ ನಡೆಸಿ ಶ್ರೀ ಗಣಪತಿಯನ್ನು ವಿಷ್ಣುಸಮುದ್ರದಲ್ಲಿ ವಿಸರ್ಜಿಸಲಾಗುತ್ತಿದೆ. ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಮಿತಿಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ವಿಸರ್ಜನಾ ಮೆರವಣಿಗೆಯುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಗಣಪತಿ ದರ್ಶನ ಪಡೆದು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಶ್ರೀ ವಿಷ್ಣುಸಮುದ್ರದಲ್ಲಿ ಗಣಪತಿ ವಿಗ್ರಹದ ವಿಸರ್ಜನೆಯೊಂದಿಗೆ 69ನೇ ವರ್ಷದ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಬಿದ್ದಿತು.

ಮಹೋತ್ಸವದ ಯಶಸ್ಸಿಗೆ ಸಮಿತಿಯ ಗೌರವಾಧ್ಯಕ್ಷ ಬಿಟುವಳ್ಳಿ ಉಮೇಶ್, ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಎಂ.ವಿ., ಕಾರ್ಯಾಧ್ಯಕ್ಷ ಹೆಬ್ಬಾಳು ಉಮಾಶಂಕರ್, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಪ್ರಸನ್ನ, ಖಜಾಂಚಿ ಪರಮೇಶ್ ಸೇರಿದಂತೆ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಹಕಾರ್ಯದರ್ಶಿಗಳು ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.