ಪಾವಗಡ: ತಾಲ್ಲೂಕಿನ ಶ್ರವಣ ದೋಷ ಹೊಂದಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳ ನೆರವಿಗಾಗಿ ಆರಂಭಿಸಿರುವ ಯೋಜನೆಯಡಿ ಐದು ಮಕ್ಕಳಿಗೆ ಸುಮಾರು ₹2.70 ಲಕ್ಷ ಮೌಲ್ಯದ ಶ್ರವಣ ಸಾಧನಗಳನ್ನು ಉಚಿತವಾಗಿ ವಿತರಿಸಲಾಯಿತು.
ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ಆಗಮಿಸಿ ಸಾಧನಗಳನ್ನು ಸ್ವೀಕರಿಸಿದರು.
ಸ್ವಾಮಿ ಜಪಾನಂದಜಿ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಆರೋಗ್ಯ ಸೇವೆ ಹಾಗೂ ಅಗತ್ಯ ನೆರವು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈಗಾಗಲೇ ಸಾವಿರಾರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ನೇತ್ರ, ವಾಕ್ ಮತ್ತು ಶ್ರವಣ ಸೇವೆಗಳನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ವೈದ್ಯರಾದ ಡಾ.ಜಿ.ವೆಂಕಟರಾಮಯ್ಯ ಅವರು ಮಾತನಾಡಿ ಒಂದು ಕಿವಿಗೆ ಸುಮಾರು ₹30 ಸಾವಿರ ವೆಚ್ಚವಾಗುವ ಶ್ರವಣ ಸಾಧನಗಳನ್ನು ಐದು ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವುದು ತಾಲ್ಲೂಕಿನ ಪಾಲಿಗೆ ವಿಶೇಷ ದಿನ. ಸ್ವಾಮಿ ಜಪಾನಂದಜಿ ಅವರ ಮಾರ್ಗದರ್ಶನದಲ್ಲಿ ಆರಂಭಿಸಿರುವ ಯೋಜನೆ ಶ್ರವಣ ದೌರ್ಬಲ್ಯ ಹೊಂದಿರುವ ಮಕ್ಕಳಿಗೆ ಹೊಸ ಜೀವನ ನೀಡುವಂತಾಗಿದೆ’ ಎಂದರು.
ಕಳೆದ 40 ವರ್ಷಗಳಿಂದ ಸ್ವಾಮಿ ಜಪಾನಂದಜಿ ಅವರ ಸೇವಾ ಕಾರ್ಯಗಳನ್ನು ಗಮನಿಸುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದವರಿಗೆ ನಿರಂತರವಾಗಿ ನೆರವು ನೀಡುವ ಮೂಲಕ ಸ್ವಾಮಿ ವಿವೇಕಾನಂದರ ಸೇವಾ ಯಜ್ಞವನ್ನು ಅನುಷ್ಠಾನಗೊಳಿಸುತ್ತಿದ್ದಾರೆ’ ಎಂದು ಹೇಳಿದರು.
ಡಾ.ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಬೆಂಗಳೂರಿನ ಉಪಶಾಖೆಯನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಆರಂಭಿಸಿ, ಸಂಸ್ಥೆಯ ಸಹಕಾರದೊಂದಿಗೆ ಗ್ರಾಮೀಣ ಭಾಗದ ಸಾವಿರಾರು ಜನರಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಿಡಿಪಿಒ ಸುನೀತಾ ಅವರು ಮಾತನಾಡಿ ಶ್ರವಣ ದೋಷ ಹೊಂದಿರುವ ಮಗುವಿನ ಕುಟುಂಬದಲ್ಲಿ ಎದುರಾಗುವ ಸಮಸ್ಯೆಗಳ ಅರಿವು ನನಗೂ ಇದೆ. ಶ್ರವಣ ಸಾಧನಗಳ ಸೌಲಭ್ಯವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ತಲುಪಿಸುತ್ತಿರುವುದು ಸಂತಸದ ಸಂಗತಿ. ಸ್ವಾಮಿ ಜಪಾನಂದಜಿ, ಆಸ್ಪತ್ರೆ, ಯೋಜನೆಯ ಮುಖ್ಯಸ್ಥೆ ಮೇಧಾ ಹೆಗಡೆ ಹಾಗೂ ತಂಡದ ಕಾರ್ಯ ಶ್ಲಾಘನೀಯ’ ಎಂದರು.
ಬೆಂಗಳೂರಿನ ಡಾ.ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ತಜ್ಞರು ಮಕ್ಕಳಿಗೆ ವೈಜ್ಞಾನಿಕ ರೀತಿಯಲ್ಲಿ ಶ್ರವಣ ಸಾಧನಗಳನ್ನು ಅಳವಡಿಸಿದರು. ಶ್ರವಣ ಸಾಧನ ಪಡೆದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ವಾರಕ್ಕೆ ಮೂರು ಬಾರಿ ಕರೆತಂದು ತಜ್ಞರ ಮಾರ್ಗದರ್ಶನದಲ್ಲಿ ಸಾಧನಗಳ ಬಳಕೆ ಹಾಗೂ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಕಲಾ ಜಿ.ಆರ್., ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
