ಪಾವಗಡ: ತಾಲ್ಲೂಕಿನ ದವಡಬೆಟ್ಟ ಗ್ರಾಮದ 75 ವರ್ಷದ ಚಿಕ್ಕಣ್ಣ ಅವರ ಮನೆ ಸೆ.21ರಂದು ಬೆಂಕಿಗೆ ಆಹುತಿಯಾಗಿದ್ದು, ಮನೆಯಲ್ಲಿದ್ದ ಅಡುಗೆ ಪಾತ್ರೆಗಳು, ಬಟ್ಟೆ, ಹಣ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.
ವೃದ್ಧ ಚಿಕ್ಕಣ್ಣ ಅವರ ಪರಿಸ್ಥಿತಿ ತಿಳಿದ ಸ್ವಾಮಿ ಜಪಾನಂದಜೀ ಅವರು ಘಟನೆಯ 24 ಗಂಟೆಯೊಳಗೆ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು. ಆಶ್ರಮದ ವತಿಯಿಂದ ಅಡುಗೆ ಪಾತ್ರೆಗಳು, ಸ್ಟೀಲ್ ತಟ್ಟೆ–ಲೋಟಗಳು, 20 ಕೆ.ಜಿ. ಅಕ್ಕಿ, ಸಕ್ಕರೆ, ಬೇಳೆ, ರವೆ ಹಾಗೂ ಸಾಂಬಾರು ಪದಾರ್ಥ ಸೇರಿದಂತೆ ಅಗತ್ಯ ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.
ಹೊದಿಕೆ, ಬೆಡ್‌ಶೀಟ್, ಟವೆಲ್, ಪಂಚೆ, ಕಂಬಳಿ ಹಾಗೂ ಪಾದರಕ್ಷೆಗಳನ್ನು ಸಹ ನೀಡಿದರು. ಮನೆ ಕಳೆದುಕೊಂಡಿರುವ ಚಿಕ್ಕಣ್ಣ ಅವರ ವಾಸಕ್ಕೆ ಅನುಕೂಲವಾಗುವಂತೆ ದೊಡ್ಡ ಟಾರ್ಪಾಲನ್ನು ನೀಡಿ, ಅದನ್ನು ಗುಡಿಸಲಿಗೆ ಹೊದಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ನೆರವು ಪಡೆದ ಚಿಕ್ಕಣ್ಣ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ತಮ್ಮ ಸೇವೆಯ ಭಾಗವಾಗಿದೆ ಎಂದು ಸ್ವಾಮಿ ಜಪಾನಂದಜೀ ಹೇಳಿದರು.
