ಬೇಲೂರು: ಸ್ಥಳೀಯ ಗಾಯತ್ರಿ ಸಹಕಾರ ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಬಿ.ಎಸ್. ಮುರಳಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಜತ ಮಹೋತ್ಸವ ಅಂಗವಾಗಿ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಗಾಯತ್ರಿ ಹೋಮ, ಸಹಸ್ರ ನಾಮ, ಸ್ತೋತ್ರಪಾರಾಯಣ, ಪೂರ್ಣಾಹುತಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪದ್ಮಶ್ರೀ ಪುರಸ್ಕೃತ ಹಾಗೂ ಆಯುಷ್ ವಿಭಾಗದ ರಾಷ್ಟ್ರೀಯ ವಿಜ್ಞಾನಿ ಡಾ. ಬಿ.ಎನ್. ಗಂಗಾಧರ್ ಮಾತನಾಡಿ ಇಂದಿನ ಧಾವಂತದ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ . ದೈನಂದಿನ ಜೀವನಶೈಲಿಯಲ್ಲಿ ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಮಾನಸಿಕ ನೆಮ್ಮದಿಯನ್ನು ಕಾಯ್ದುಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಅಡಿಪಾಯ ಎಂದರು.
ಅಧ್ಯಕ್ಷ ಬಿ.ಎಸ್. ಮುರಳಿ ಮಾತನಾಡಿ , ಗಾಯತ್ರಿ ಸಹಕಾರ ಸಂಘವು ಕಳೆದ 25 ವರ್ಷಗಳಿಂದ ಗ್ರಾಹಕರು ಹಾಗೂ ಸದಸ್ಯರ ನಂಬಿಕೆಯನ್ನು ಗಳಿಸಿ, ಸಹಕಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿಕೊಂಡು ಬಂದಿದೆ. ಸಂಸ್ಥೆಯ ಈ ಬೆಳ್ಳಿ ಹಬ್ಬದ ಹಂತಕ್ಕೆ ತಲುಪಲು ಸಹಕರಿಸಿದ ಎಲ್ಲಾ ಸದಸ್ಯರಿಗೆ ಸಿಬ್ಬಂದಿವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಆಧ್ಯಾತ್ಮಿಕ ಚಿಂತಕರು ಹಾಗೂ ನೃತ್ಯಗಂಗಾ ಪ್ರದರ್ಶನ ಕಲಾಕೇಂದ್ರದ ನಿರ್ದೇಶಕರಾದ ವಿದೂಷಿ ರೂಪಶ್ರೀ ಮಧುಸೂದನ್ ಅವರು ಧಾರ್ಮಿಕ ಪ್ರವಚನ ನೀಡಿದರು.
ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಿತು.
ಸಾರ್ವಜನಿಕ ಆಸ್ಪತ್ರೆಯ ಫಿಸಿಷಿಯನ್ ಡಾ. ಹೆಚ್ ಎಸ್ ರಾಜೀವ್, ಚೆನ್ನಕೇಶವ ದೇಗುಲದ ಪ್ರಧಾನ ಆಗಮಿಕ ಬಿಎಸ್ ಶ್ರೀನಿವಾಸ ಭಟ್ಟರ್, ಪೂರ್ಣ ಪ್ರಜ್ಞಾ ಶಾಲೆಯ ಯೋಗ ಶಿಕ್ಷಕ ಎನ್ ರಾಮಾಜೋಯಿಸ್ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷೆ ಮೀನಾಅರಸ್, ನಿರ್ದೇಶಕರಾದ ರಮೇಶ್, ಕುಮಾರಸ್ವಾಮಿ, ಶಶಿಕುಮಾರ್, ಕೇಶವಮೂರ್ತಿ, ರಾಘವೇಂದ್ರ, ಮಂಜುನಾಥ್, ಶ್ರೀವತ್ಸ, ನವರತ್ನಕುಮಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್ ಎಸ್ ನಾಗಭೂಷಣ್, ಖಜಾಂಚಿ ಶೈಲಜಾ ಶಶಿ ಇತರರು ಇದ್ದರು.
