Ticker

6/recent/ticker-posts

ಬೇಲೂರು ಪುರಸಭೆ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

ಬೇಲೂರು: ಬೇಲೂರು ಪುರಸಭೆ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ
ತ್ಯಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲು ಪುರಸಭೆ ಅಧ್ಯಕ್ಷ ಆಕ್ರಂ ಶರೀಫ್ ಮನವಿ

​ಬೇಲೂರು ಪಟ್ಟಣದ ನೈರ್ಮಲ್ಯ ಮತ್ತು ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ. ನಗರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬ ನಾಗರಿಕರೂ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಬೇಲೂರು ಪುರಸಭೆ ಅಧ್ಯಕ್ಷ ಆಕ್ರಂ ಶರೀಫ್ ಮನವಿ ಮಾಡಿದರು.

​ಪಟ್ಟಣದಲ್ಲಿ  ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮನೆಗಳಲ್ಲೇ ನಾಲ್ಕು ವಿಧದ ತ್ಯಾಜ್ಯಗಳನ್ನು ಕಡ್ಡಾಯವಾಗಿ ವಿಂಗಡಿಸಬೇಕು. ಈ ನಿಯಮವು ಈಗಾಗಲೇ ಕಾನೂನಾಗಿ ಜಾರಿಯಲ್ಲಿದ್ದು, ಸಾರ್ವಜನಿಕರು ಒಣ ತ್ಯಾಜ್ಯ, ಹಸಿ ತ್ಯಾಜ್ಯ ಸೇರಿದಂತೆ ವಿವಿಧ ಮಾದರಿಯ ಕಸವನ್ನು ಪ್ರತ್ಯೇಕವಾಗಿಯೇ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು," ಎಂದು ವಿನಂತಿಸಿಕೊಂಡರು.
​
ಪುರಸಭೆ ಆರೋಗ್ಯ ಅಧಿಕಾರಿ ಜ್ಯೋತಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ‘ಕಸ ಮುಕ್ತ ಭಾರತ’ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯವರೆಗೆ ‘ಸ್ವಚ್ಛತೆಯೇ ಸೇವೆ’ ಅಭಿಯಾನ ಆಯೋಜಿಸಲಾಗಿದೆ ಎಂದರು.

​ಇದುವರೆಗೆ ಸಾರ್ವಜನಿಕರು ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಮಾತ್ರ ಪ್ರತ್ಯೇಕಿಸುತ್ತಿದ್ದರು. ಆದರೆ ಇನ್ಮುಂದೆ ತ್ಯಾಜ್ಯವನ್ನು ಹಸಿ ಕಸ, ಒಣ ಕಸ, ಅಪಾಯಕಾರಿ ತ್ಯಾಜ್ಯ ಹಾಗೂ ಇ-ತ್ಯಾಜ್ಯ ಎಂದು ನಾಲ್ಕು ಬಗೆಯಾಗಿ ವಿಂಗಡಿಸಿ ಪುರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

​ಪಟ್ಟಣದ ನೈರ್ಮಲ್ಯ ನಿರ್ವಹಣೆಯ ಬಗ್ಗೆ ವಿವರ ನೀಡಿದ ಅವರು, "ನಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 8 ಮೆಟ್ರಿಕ್ ಟನ್ (TPD) ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸುಸೂತ್ರವಾಗಿ ವಿಲೇವಾರಿ ಮಾಡಲು 56 ಜನ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗಾಗಿ ಪ್ರಸ್ತುತ 2 ಟ್ರ್ಯಾಕ್ಟರ್ ಹಾಗೂ 5 ಆಟೋ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ," ಎಂದು ವಿವರಿಸಿದರು.
​
ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎ. ಏರ್ ಅಶೋಕ್ ಮಾತನಾಡಿ, "ಬೇಲೂರು ಇವತ್ತು ಸುಂದರವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕರೇ ಮುಖ್ಯ ಕಾರಣ. ಬೆಳಿಗ್ಗೆ 4 ಗಂಟೆಗೆ ಎದ್ದು, ವಿಶ್ವ ಪಾರಂಪರಿಕ ತಾಣವಾದ ಚೆನ್ನಕೇಶವಸ್ವಾಮಿ ದೇವಾಲಯದ ಮುಂಭಾಗ, ನೆಹರೂ ನಗರ, ಜ್ಯೋತಿ ನಗರ ಸೇರಿದಂತೆ ಪ್ರತಿಯೊಂದು ಗಲ್ಲಿ-ಗಲ್ಲಿಯಲ್ಲೂ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಶ್ರಮಕ್ಕೆ ಬೇಲೂರು ಜನತೆಯ ಪರವಾಗಿ ಧನ್ಯವಾದಗಳು ಸಲ್ಲಬೇಕು," ಎಂದು ಶ್ಲಾಘಿಸಿದರು. ಅಲ್ಲದೆ, ಪುರಸಭೆಯ ಹಾಲಿ ಅವಧಿ ಮುಕ್ತಾಯದ ಹಂತದಲ್ಲಿದ್ದು, ಇದು ನಮಗೆ ಕೊನೆಯ ಅವಕಾಶವಾಗಿದೆ ಎಂದರು.

​ಈ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಉಷಾಸತೀಶ್, ಸದಸ್ಯರಾದ ತೀರ್ಥಕುಮಾರಿ, ಜಮಾಲ್ ಜಗದೀಶ್, ಜಾಮ್ಮಿಲಾ, ಸೌಮ್ಯ, ಮೀನಾಕ್ಷಿ, ಮಣಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.