ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತೆ, ಆರೋಗ್ಯಕರ ಜೀವನಶೈಲಿ, ನೀರು ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಯು ಹಲವು ಶೈಕ್ಷಣಿಕ ಹಾಗೂ ಪರಿಸರ ಸಂಬಂಧಿತ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಮಕ್ಕಳಲ್ಲಿ ಪರಿಸರ ಕಾಳಜಿ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವುದು, ಶಾಲೆಯ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗಳು ಮತ್ತು ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಗಣಿಸಿ, ತುಮಕೂರು ವಿಜ್ಞಾನ ಕೇಂದ್ರವು ಶ್ರೀಮತಿ ಅರಸಮ್ಮ ಮತ್ತು ಡಿ.ಸಿ. ಚಿಕ್ಕಣ್ಣ ಅವರ ಸ್ಮರಣಾರ್ಥ ನೀಡುವ ‘ಪರಿಸರ ಶಾಲಾ ಪ್ರಶಸ್ತಿ’ಗೆ ಸಹನಾ ಆಂಗ್ಲ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡಿದೆ.
ಶಾಲೆಯ ಪರವಾಗಿ ಸಮಾಜ ವಿಜ್ಞಾನ ಶಿಕ್ಷಕ ಜಿನಿಶ್ ಅವರು ವಿದ್ಯಾರ್ಥಿಗಳೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯು ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರ ಪರಿಸರ ಕಾಳಜಿ ಮತ್ತು ನಿರಂತರ ಪ್ರಯತ್ನಕ್ಕೆ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷೆ ಅಕ್ಕಮ್ಮ, ಕಾರ್ಯದರ್ಶಿ ಪಿ.ಪ್ರಸಾದ್, ಉಪಾಧ್ಯಕ್ಷ ಸಿ. ಯತಿರಾಜು, ಪ್ರೊಫೆಸರ್ ಟಿ.ಎನ್. ಚಂದ್ರಕಾಂತ್, ಸಿ. ವಿಶ್ವನಾಥ್, ಕೆ. ನಾಗರಾಜ್ ರಾವ್, ಎಂ. ಗಂಗಾಧರಪ್ಪ, ಅರಸಪ್ಪ, ಎನ್. ಇಂದಿರಮ್ಮ, ರಾಮಕೃಷ್ಣಪ್ಪ, ಹನುಮದಾಸ್ ಹಾಗೂ ಈ. ಬಸವರಾಜ್ ಇದ್ದರು.
