Ticker

6/recent/ticker-posts

ಪ್ರಜಾಸೇವೆ’ ಕಾರ್ಯಕ್ರಮವನ್ನು ಹಳೇಬೀಡು ಹೋಬಳಿ ಮಟ್ಟದಲ್ಲಿ ಸೆ.26ರಂದು ಆಯೋಜನೆ

ಬೇಲೂರು:ಕರ್ನಾಟಕ ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ‘ಪ್ರಜಾಸೇವೆ’ ಕಾರ್ಯಕ್ರಮವನ್ನು ಹಳೇಬೀಡು ಹೋಬಳಿ ಮಟ್ಟದಲ್ಲಿ ಸೆ.26ರಂದು ಆಯೋಜಿಸಲಾಗಿದೆ. 

ಹಳೇಬೀಡಿನ ನಂಜಮ್ಮ–ಚನ್ನೇಗೌಡ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ತಮ್ಮ ಕುಂದುಕೊರತೆಗಳು, ಅಹವಾಲುಗಳು ಹಾಗೂ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ ಎಂದು ಬೇಲೂರು ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ತಿಳಿಸಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾರ್ವಜನಿಕ ಸೇವೆಗಳು ಜನರಿಗೆ ತ್ವರಿತವಾಗಿ ತಲುಪಬೇಕು. ಸರ್ಕಾರಿ ಕಚೇರಿಗಳಲ್ಲಿ ಅನಗತ್ಯ ವಿಳಂಬವಾಗುವುದನ್ನು ತಪ್ಪಿಸಿ, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಈಗಾಗಲೇ ಬೇಲೂರು ತಾಲೂಕು ಕೇಂದ್ರದ ತಹಸೀಲ್ದಾರ್ ಕಚೇರಿಯಲ್ಲಿ ಪ್ರಜಾಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಇದೇ ಮೊದಲ ಬಾರಿಗೆ ಹೋಬಳಿ ಮಟ್ಟದಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೊದಲ ಹಂತದಲ್ಲಿ ಹಳೇಬೀಡು ಹೋಬಳಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಇತರ ಹೋಬಳಿಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದನೆ

ಪ್ರಜಾಸೇವೆ ಕಾರ್ಯಕ್ರಮದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಮುಂದೆ ಮಂಡಿಸಬಹುದು.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಎದುರಾಗುತ್ತಿರುವ ತೊಂದರೆಗಳು, ದಾಖಲೆಗಳ ಸಮಸ್ಯೆ, ಪ್ರಮಾಣಪತ್ರಗಳ ವಿತರಣೆ, ಜಮೀನು ಹಾಗೂ ಕಂದಾಯ ಸಂಬಂಧಿತ ವಿಚಾರಗಳು ಸೇರಿದಂತೆ ಸಾರ್ವಜನಿಕರ ವಿವಿಧ ಅಹವಾಲುಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಹಸೀಲ್ದಾರ್ ಹೇಳಿದರು.

ಶಾಸಕರ ನೇತೃತ್ವ

ಹಳೇಬೀಡಿನಲ್ಲಿ ನಡೆಯಲಿರುವ ಪ್ರಜಾಸೇವೆ ಕಾರ್ಯಕ್ರಮವನ್ನು ಶಾಸಕ ಹೆಚ್.ಕೆ. ಸುರೇಶ್ ಅವರ ನೇತೃತ್ವದಲ್ಲಿ ನಡೆಸಲಾಗುವುದು. ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಿಸಿದ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲಿದ್ದಾರೆ.

ಹಳೇಬೀಡು ಹೋಬಳಿಯ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬೇಕು.

ಅಹವಾಲುಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಸಮಸ್ಯೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು ಎಂದು ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಮನವಿ ಮಾಡಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಪದೇಪದೇ ಅಲೆದಾಡುವುದನ್ನು ತಪ್ಪಿಸಿ, ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.