ಅವೈಜ್ಞಾನಿಕ ರಸ್ತೆ ಮತ್ತು ಚರಂಡಿ ನಿರ್ಮಾಣದಿಂದ ಮಳೆ ಬಂದಾಗ ಕೆರೆಯಂತಾಗುವ ಪ್ರದೇಶ; ಹೊಳೆಬೀದಿಯ ಮೂಲಕ ಹೊಳೆ ಸೇರುವ ನೀರು
ಬೇಲೂರು:-ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಬೇಲೂರಿನ ಹರ್ಡಿಕರ್ ವೃತ್ತದ ಮುಂಭಾಗದಲ್ಲಿ ಮಳೆನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಧಾರಾಕಾರ ಮಳೆಗೆ ರಸ್ತೆ ಜಲಾವೃತವಾಗುತ್ತಿದೆ. ಇದರಿಂದ ಸಾರ್ವಜನಿಕರು, ಹಾಗೂ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.
ಬುಧವಾರ ಮಧ್ಯಾಹ್ನ ಸುರಿದ ಮಳೆಯಿಂದ ಹರ್ಡಿಕರ್ ವೃತ್ತದ ಮುಂಭಾಗದಿಂದ ಇಂದಿರಾ ಕ್ಯಾಂಟೀನ್‌ವರೆಗೂ ನೀರು ಸಂಗ್ರಹಗೊಂಡು ಕೆರೆಯಂತಾಗಿತ್ತು. ಬಳಿಕ ನೀರು ಹೊಳೆಬೀದಿಯ ಮೂಲಕ ಹೊಳೆ ಸೇರಿತು.
ರಸ್ತೆ ಮತ್ತು ಚರಂಡಿಗಳ ಅವೈಜ್ಞಾನಿಕ ನಿರ್ಮಾಣವೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚರಂಡಿಗಳಿಗೆ ಅಗತ್ಯ ಇಳಿಜಾರು, ನೀರು ಸಾಗುವ ಸಾಮರ್ಥ್ಯ ಹಾಗೂ ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿಮಳೆಯಲ್ಲೂ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ.
ನೀರು ದೀರ್ಘಕಾಲ ನಿಂತರೆ ರಸ್ತೆ ಹಾಳಾಗುವ ಸಾಧ್ಯತೆಯೂ ಇದೆ.ಮಳೆಗಾಲ ಆರಂಭವಾದಾಗಲೆಲ್ಲ ಈ ಸಮಸ್ಯೆ ಮರುಕಳಿಸುತ್ತಿದ್ದು, ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ದೊರೆತಿಲ್ಲ. ಕಳೆದ ಮೂರು–ನಾಲ್ಕು ಶಾಸಕರ ಅವಧಿಗಳಲ್ಲೂ ಸಮಸ್ಯೆ ಮುಂದುವರಿದಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಪುರಸಭೆ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ತಜ್ಞರ ಸಲಹೆಯೊಂದಿಗೆ ಹರ್ಡಿಕರ್ ವೃತ್ತದ ಮುಂಭಾಗದಿಂದ ಇಂದಿರಾ ಕ್ಯಾಂಟೀನ್ ಹಾಗೂ ಹೊಳೆಬೀದಿವರೆಗಿನ ಮಳೆನೀರು ಹರಿವಿನ ಮಾರ್ಗವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು. ಸೂಕ್ತ ಚರಂಡಿ, ಮಳೆನೀರು ಸಂಗ್ರಹ ಮತ್ತು ಹರಿವಿನ ವ್ಯವಸ್ಥೆ ಕಲ್ಪಿಸಿ, ಮುಂದಿನ ಮಳೆಗಾಲದೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
